ಬೆಳಗಾವಿ: ದಟ್ಟ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿರುವ ಅಮಗಾಂವ್ ಎಂಬ ಕುಗ್ರಾಮದ ಜನರು ಮಹಿಳೆಗೆ ಹಠಾತ್ ಎದೆನೋವು ಕಾಣಿಸಿಕೊಂಡ ನಂತರ 10 ಕಿ.ಮೀ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ತಲುಪಿದ್ದಾರೆ. ಈ ಘಟನೆಯ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮೂಲಗಳ ಪ್ರಕಾರ, ಶುಕ್ರವಾರ ಈ ಘಟನೆ ನಡೆದಿದ್ದು, 38 ವರ್ಷದ ಹರ್ಷದಾ ಘಾಡಿ ಅವರಿಗೆ ಎದೆನೋವು ಕಾಣಿಸಿಕೊಂಡ ನಂತರ ಪ್ರಜ್ಞೆ ತಪ್ಪಿದರು. ಬೇರೆ ದಾರಿಯಿಲ್ಲದೆ, ಗ್ರಾಮದ 20 ಯುವಕರು ಮರದ ಸ್ಟ್ರೆಚರ್ ತಯಾರಿಸಿ ಹರ್ಷದಾ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು 10 ಕಿ.ಮೀ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ತಲುಪಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆ ನಡುವೆ ರೋಗಿಯನ್ನು ದಪ್ಪ ಪ್ಲಾಸ್ಟಿಕ್ ನಿಂದ ಮುಚ್ಚಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ದಟ್ಟ ಅರಣ್ಯ ಪ್ರದೇಶದಲ್ಲಿರುವ ಅಮಗಾಂವ್ ಎಂಬ ಕುಗ್ರಾಮಕ್ಕೆ ಬರಲು ರಸ್ತೆಯೂ ಇಲ್ಲ, ಮೊಬೈಲ್ ನೆಟ್ ವರ್ಕ್ ಕೂಡ ಇಲ್ಲ. ಆಂಬ್ಯುಲೆನ್ಸ್ ಬರಲು ರಸ್ತೆ ಇರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಚಿಕಲೆವರೆಗೂ ಆ ಮಹಿಳೆಯನ್ನು ಗ್ರಾಮಸ್ಥರು ಹೊತ್ತುಕೊಂಡು ಬಂದಿದ್ದಾರೆ. ಅಲ್ಲಿಂದ ಮತ್ತೆ 1 ಕಿಲೋಮೀಟರ್ ದೂರ ಹೋಗಿ ಮೊಬೈಲ್ ನೆಟ್ವರ್ಕ್ ಬರುವ ಸ್ಥಳದಿಂದ 108ಗೆ ಕರೆ ಮಾಡಿದ್ದಾರೆ.
ನಂತರ ಆಂಬುಲೆನ್ಸ್ ಮೂಲಕ ರೋಗಿಯನ್ನು ಬಿಮ್ಸ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹರ್ಷದಾ ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ಅಮಟೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಅಮಗಾಂವ್ ಗ್ರಾಮವು ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯಿಂದ 15 ಕಿ.ಮೀ ದೂರದಲ್ಲಿದೆ.