ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳ ಅಭಿವೃದ್ಧಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ವಾವಲಂಬಿ, ಸಾಂದೀಪಿನಿ ಶಿಷ್ಯವೇತನ ಯೋಜನೆ ಜಾರಿಗೊಳಿಸಿದ್ದು, ಅರ್ಹರು ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಂಡಳಿಯ ಡಿಬಿಟಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳು ಸ್ವಯಂ ಉದ್ಯೋಗ ಆರ್ಥಿಕ ಚಟುವಟಿಕೆಗಳಿಗಾಗಿ ಬ್ಯಾಂಕ್ ನಿಂದ ಸಾಲ ಪಡೆದಿದ್ದಲ್ಲಿ ಸಾಲದ ಪೈಕಿ ಶೇಕಡ 20ರಷ್ಟು ಹಣವನ್ನು ಸರ್ಕಾರ ಸ್ವಾವಲಂಬಿ ಯೋಜನೆ ಅಡಿ ಸಹಾಯಧನ ನೀಡಲಿದೆ ಎಂದು ತಿಳಿಸಿದ್ದಾರೆ.
ಗರಿಷ್ಠ 5 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಿದ್ದು, ಅಂಗಡಿ, ಹೈನುಗಾರಿಕೆ, ಆಟಿಕೆ ತಯಾರಿಕೆ, ವ್ಯಾಪಾರ, ಮೊಬೈಲ್ ಅಂಗಡಿ, ಗುಡಿ ಕೈಗಾರಿಕೆ ಮೊದಲಾದ ಹೆಚ್ಚಿನ ಘಟಕ ವೆಚ್ಚವಿರುವ ಆದಾಯ ಬರುವಂತಹ ಲಾಭದಾಯಕ ಉದ್ಯಮ ಸ್ಥಾಪಿಸಲು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದವರು ಯೋಜನೆಗೆ ಅರ್ಹರಿರುತ್ತಾರೆ, ಜನವರಿ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದ್ದಾರೆ,
ಮೆಟ್ರಿಕ್ ನಂತರದ ಮೊದಲ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ಬ್ರಾಹ್ಮಣ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ 15,000 ರೂ.ವರೆಗೆ ಸಾಂದೀಪಿನಿ ಯೋಜನೆಯಡಿ ಶಿಷ್ಯವೇತನ ನೀಡಲಿದ್ದು, ಪದವಿ, ಸ್ನಾತಕೋತ್ತರ ಪದವಿ ಸೇರಿ ವಿವಿಧ ಕೋರ್ಸ್ ಗಳಿಗೆ ಸಿಇಟಿ ಪ್ರವೇಶ ಪರೀಕ್ಷೆ ಮೂಲಕ ತೇರ್ಗಡೆ ಹೊಂದಿದವರಿಗೆ ದಾಖಲಾತಿ ಶುಲ್ಕ ಮೊತ್ತದ ಮೂರನೇ ಎರಡು ಭಾಗ, ಗರಿಷ್ಠ ಒಂದು ಲಕ್ಷ ರೂಪಾಯಿವರೆಗೆ ಬ್ರಾಹ್ಮಣ ಅಭಿವೃದ್ಧಿ ಮೂಲ ನಿಗಮದ ಮೂಲಕ ಸರ್ಕಾರ ಪಾವತಿಸುತ್ತದೆ. ಜನವರಿ 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ಯೋಜನೆ ಸದುಪಯೋಗ ಪಡೆಯುವಂತೆ ಹೇಳಿದ್ದಾರೆ.