ಬೆಂಗಳೂರು: ಆಸ್ತಿ ಅಕ್ರಮಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ಬ್ಲಾಕ್ ಚೈನ್ ತಂತ್ರಜ್ಞಾನ ಅನುಷ್ಠಾನಗೊಳಿಸಲಾಗುತ್ತಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಕಬಳಿಸುವ ಮತ್ತು ಬೇರೆಯವರ ಹೆಸರಿನಲ್ಲಿರುವ ಆಸ್ತಿಯನ್ನು ಇನ್ಯಾರಿಗೋ ಹಾಗೂ ಒಂದೇ ಆಸ್ತಿಯನ್ನು ಹಲವರಿಗೆ ಮಾರಾಟ ಮಾಡುವ ವಂಚಕರಿಗೆ ಬ್ರೇಕ್ ಹಾಕಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಬ್ಲಾಕ್ ಚೈನ್ ತಂತ್ರಜ್ಞಾನ ಈಗಾಗಲೇ ಕೆಲವು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿದೆ. ಕಾವೇರಿ ತಂತ್ರಾಂಶ ಬಳಸಿಕೊಂಡು ಆಸ್ತಿ ನೋಂದಣಿ ಮಾಡಲಾಗುತ್ತಿದೆ. ಇನ್ನು ಕೆಲವು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿಯೂ ಬ್ಲಾಕ್ಚೈನ್ ತಂತ್ರಜ್ಞಾನ ಆಧಾರಿತ ಕಾವೇರಿ ತಂತ್ರಾಂಶ ಬಳಕೆ ಆಸ್ತಿ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಿದ್ದು, ರಾಜ್ಯದೆಲ್ಲೆಡೆ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ.
ಈ ವ್ಯವಸ್ಥೆಯಡಿ ಆಸ್ತಿ ವರ್ಗಾವಣೆಯ ಪ್ರತಿಯೊಂದು ಪ್ರಕ್ರಿಯೆ ಕಾವೇರಿ ಕೀ ಕಾರ್ಡ್ ನಲ್ಲಿ ದಾಖಲಾಗುತ್ತದೆ. ದಸ್ತಾವೇಜುಗಳ ನೋಂದಣಿ ಮಾಹಿತಿ 5 ಪ್ರತ್ಯೇಕ ಸರ್ವರ್ ಗಳಲ್ಲಿ ದಾಖಲಾಗುತ್ತದೆ. ಇದನ್ನು ಟೆಂಪರ್ ಮಾಡುವುದು ಅಸಾಧ್ಯವಾಗಿದ್ದು, ಆಸ್ತಿ ವರ್ಗಾವಣೆ ಪ್ರಕ್ರಿಯೆ ಟ್ರ್ಯಾಕಿಂಗ್ ಮಾಡುವುದು ಸುಲಭವಾಗಿರುತ್ತದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನು ಆಸ್ತಿ ಮಾಲೀಕರು ಮತ್ತು ಖರೀದಿಸುವವರ ಮೊಬೈಲ್ ಗೆ ಓಟಿಪಿ ಕಳುಹಿಸಿ ನೋಂದಣಿ ಮಾಡುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಸೇವೆಯಲ್ಲಿ ವ್ಯತ್ಯವಾಗುತ್ತಿದ್ದ ಹಿನ್ನೆಲೆಯಲ್ಲಿ ಇದನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ.