ಮೈಸೂರು : ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿರುವುದರಿಂದ ಮೋಡ ಬಿತ್ತನೆ ನಡೆಸುವ ಸಾಧ್ಯತೆಯನ್ನು ರಾಜ್ಯ ಸರ್ಕಾರ ಬಹುತೇಕ ಕೈಬಿಟ್ಟಿದ್ದು, ಮೋಡ ಬಿತ್ತನೆ ಯಾವ ಕಾಲದಲ್ಲೂ ಯಶಸ್ವಿಯಾಗಿಲ್ಲ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದ್ದು, ರೈತರ ಬೆಳೆಗಳಿಗೂ ನೀರಿಲ್ಲದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಬರದ ಬಗ್ಗೆ ತೀರ್ಮಾನಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೋಡ ಬಿತ್ತನೆ ಈವರೆಗೂ ಎಲ್ಲಿಯೂ ಯಶಸ್ವಿಯಾದ ಉದಾಹರಣೆ ಇಲ್ಲ. ಹಾಗಾಗಿ ಬರಗಾಲ ಘೋಷಣೆ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುವುದು. ಬರಗಾಲ ಘೋಷಣೆಯಾದ ಮೇಲೆ ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು. ಕೇಂದ್ರ ಸರ್ಕಾರದವರು ಪರಿಶೀಲಿಸಿದ ನಂತರ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳ ಪ್ರಕಾರ ನೆರವು ನೀಡುತ್ತಾರೆ ಎಂದರು.
ಬರಗಾಲ ಎಂದು ಘೋಷಣೆಯಾದ ನಂತರ ಆ ತಾಲ್ಲೂಕುಗಳಲ್ಲಿ ಬರ ಪರಿಹಾರವಾಗಿ ಜನರಿಗೆ ಕೆಲಸ, ಮುಂತಾದ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದರು.