ದೇಶದ ಉತ್ತರ ತುದಿಯಲ್ಲಿರುವ ಲಡಾಖ್ ಒಂದು ಶೀತ ಮರುಭೂಮಿ ಪ್ರದೇಶ. ತನ್ನ ಶೀತಮಯ ವಾತಾವರಣ ಹಾಗೂ ಬರಡು ಪರ್ವತ ಶ್ರೇಣಿಗಳಿಂದ ವಿಶಿಷ್ಟ ಸೌಂದರ್ಯದ ಘನಿಯಾಗಿರುವ ಲಡಾಖ್‌ನಲ್ಲಿ ಇತ್ತೀಚೆಗೆ ನಿರ್ಮಾಣಗೊಂಡ ಕ್ರೀಡಾಂಗಣದ ಚಿತ್ರವೊಂದು ನೆಟ್ಟಿಗರ ಹೃನ್ಮನ ಸೆಳೆಯುತ್ತಿದೆ.
ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ‍್ಯಾಕ್ ಇದ್ದು, ಆಸ್ಟ್ರೋ ಟರ್ಫ್ ಫುಟ್ಬಾಲ್ ಮೈದಾನವನ್ನೂ ರಚಿಸಲಾಗಿದೆ. ದೇಶದ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಫುಟ್ಬಾಲ್ ಕ್ರೀಡಾಂಗಣ ಇದಾಗಿದ್ದು, 30,000 ವೀಕ್ಷಕರ ಸಾಮರ್ಥ್ಯ ಹೊಂದಿದೆ.
“ಈ ನೋಟವೇ ನಿಮ್ಮ ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ. ಆಮ್ಲಜನಕ ಕೊರತೆಯಿಂದಾಗಿ ಅಲ್ಲ….!! ಸುಮ್ಮನೇ ಮನೆಯಲ್ಲಿ ಸೋಫಾದಲ್ಲಿ ಕುಳಿತು ಕ್ರಿಕೆಟ್ ನೊಡುವ ಬದಲು, ಈ ಕ್ರೀಡಾಂಗಣದಲ್ಲಿ ಭಾನುವಾರದಂದು ಆಯೋಜಿಸುವ ಫುಟ್ಬಾಲ್ ಪಂದ್ಯವೊಂದನ್ನು ವೀಕ್ಷಿಸಲು ಹಾಜರಿರಲು ಬಯಸುವೆ,” ಎಂದು ಆನಂದ್ ಮಹಿಂದ್ರಾ ಈ ಕ್ರೀಡಾಂಗದ ಫೋಟೋ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿದ್ದಾರೆ.