ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎಂಬ ಮಾತು ಕೊರೊನಾಗೆ ಸರಿಯಾಗಿ ಅನ್ವಯವಾಗುತ್ತಿದೆ. ಭಾರತ ಸೇರಿ ಜಗತ್ತಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಅದರ ಪರಿಣಾಮಗಳು ಮಾತ್ರ ಇನ್ನೂ ಜನರನ್ನು ಬಾಧಿಸುತ್ತಿವೆ. ಸೋಂಕಿನಿಂದ ಗುಣಮುಖರಾದರೂ ಕೆಲ ಅಡ್ಡ ಪರಿಣಾಮಗಳು ಜನರನ್ನು ಕಾಡುತ್ತಿವೆ.
ಕೊರೊನಾ ನಂತರದ ಕಾಯಿಲೆಗಳು ನಾಗರಿಕರನ್ನು ಕಾಡುತ್ತಿರುವ ಬೆನ್ನಲ್ಲೇ ಹೊಸ ಅಧ್ಯಯನ ವರದಿಯೊಂದು ಬೆಚ್ಚಿಬೀಳಿಸುವ ಅಂಶವೊಂದನ್ನು ಬಹಿರಂಗಪಡಿಸಿದೆ. ’ನೇಚರ್’ ಎಂಬ ಜರ್ನಲ್‌ನಲ್ಲಿ ನೂತನ ಅಧ್ಯಯನ ವರದಿ ಪ್ರಕಟವಾಗಿದ್ದು, ಕೊರೊನಾದಿಂದ ಗುಣಮುಖರಾದವರ ಮಿದುಳು ಸಂಕುಚಿತಗೊಳ್ಳುತ್ತಿದೆ ಎಂದು ತಿಳಿಸಿದೆ. ಹಾಗಾಗಿ ಅಧ್ಯಯನ ವರದಿಯು ಕೊರೊನಾದಿಂದ ಗುಣಮುಖರಾದ ಕೋಟ್ಯಂತರ ಜನರಲ್ಲಿ ಭೀತಿ ಹೆಚ್ಚಿಸಿದೆ.
ಬ್ರಿಟನ್‌ನಲ್ಲಿ ವಿಜ್ಞಾನಿಗಳು ಸುಮಾರು 51-81 ವರ್ಷದೊಳಗಿನ 785 ಜನರ ಮಿದುಳಿನ ವರದಿ ಪರಿಶೀಲಿಸಿದ್ದಾರೆ. 785 ಜನರಲ್ಲಿ401 ಜನರು ಕೊರೊನಾದಿಂದ ಗುಣಮುಖರಾಗಿದ್ದು, ಅವರ ಮಿದುಳನ್ನು ಎರಡು ಬಾರಿ ಸ್ಕ್ಯಾನ್ ಮಾಡಲಾಗಿದೆ.
ಸುಮಾರು 141 ದಿನಗಳ ಅಂತರದಲ್ಲಿ ಎರಡೂ ಸ್ಕ್ಯಾನ್ ಮಾಡಿದ್ದು, ಇದರ ವರದಿಯು ವೈದ್ಯರನ್ನೇ ಬೆಚ್ಚಿಬೀಳಿಸಿದೆ. ಸೋಂಕಿನಿಂದ ಗುಣಮುಖರಾದವರ ಮಿದುಳು ಸವೆದು ಸಂಕುಚಿತವಾಗುತ್ತದೆ ಎಂಬ ಅಂಶವು ತೀವ್ರ ಚರ್ಚೆಗೆ ಗ್ರಾಸವಾಗಿದೆ.
’ಎಲ್ಲ ವಯಸ್ಸಿನ ಜನರು ಸಹ ಕೊರೊನಾದಿಂದ ಗುಣಮುಖರಾಗಿದ್ದರೆ ಅವರ ಮಿದುಳಿನಲ್ಲಿ ವ್ಯತ್ಯಾಸ ಕಾಣುತ್ತಿದೆ. ಅದರಲ್ಲೂ, ವಾಸನೆ ಹಾಗೂ ಸ್ಮರಣಶಕ್ತಿ ಇರುವ ಮಿದುಳಿನ ಭಾಗಕ್ಕೆ ಹೆಚ್ಚು ಹಾನಿಯಾಗುತ್ತಿದೆ. ನಾವು ಜನರನ್ನು ಹೆದರಿಸಲು ಹೀಗೆ ಹೇಳುತ್ತಿಲ್ಲ. ಮಿದುಳಿಗೆ ಹಾನಿಯಾಗಿರುವುದಕ್ಕೆ ನಮ್ಮ ಬಳಿ ಹಲವು ನಿದರ್ಶನಗಳಿವೆ’ ಎಂದು ಡಾ. ಸ್ಪೆರೆನಾ ಸ್ಪುಡಿಚ್ ಮಾಹಿತಿ ನೀಡಿದ್ದಾರೆ.