ತಪ್ಪಿಸಿಕೊಳ್ಳದಂತೆ ಪ್ರತಿದಿನ ಕೋಚಿಂಗ್ ಕ್ಲಾಸ್ ಗೆ ಹೋಗು , ವಿದ್ಯಾಭ್ಯಾಸದ ಕಡೆ ಗಮನ ಹರಿಸು ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.
ಅವಧಪುರಿಯ ವಸತಿ ಸಂಕೀರ್ಣ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆಕೆ ಪ್ರಾಣ ಬಿಟ್ಟಿದ್ದಾಳೆ. ಅವಧಪುರಿ ಪೊಲೀಸ್ ಠಾಣೆಯ ಎಸ್ಎಚ್ಒ ಶಿವರಾಜ್ ಚೌಹಾಣ್ ಮಾತನಾಡಿ, ಮೃತ ಬಾಲಕಿಯನ್ನು ರಿಯಾ ಪಾಂಡೆ (14) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಕೋಚಿಂಗ್ಗೆಂದು ಮನೆಯಿಂದ ಹೋಗಿದ್ದ ಆಕೆ ರಾತ್ರಿ 8 ಗಂಟೆಯವರೆಗೆ ವಾಪಸ್ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಆಕೆಯ ಸಹೋದರ ಕೋಚಿಂಗ್ ಇನ್ಸ್ಟಿಟ್ಯೂಟ್ಗೆ ಹೋದಾಗ ಆ ದಿನ ರಿಯಾ ಕೋಚಿಂಗ್ಗೆ ಬಂದಿಲ್ಲ ಎಂದು ತಿಳಿದುಬಂದಿದೆ. ಆಕೆಯ ಸಹೋದರ ತನ್ನ ಪೋಷಕರಿಗೆ ಇದನ್ನು ವಿವರಿಸಿದ್ದಾನೆ. ಅವರು ಹುಡುಕಾಡಿದಾಗ ರಿಯಾ ಕಟ್ಟಡದ ಟೆರೇಸ್ ನಿಂದ ಜಿಗಿದು ಪ್ರಾಣ ಬಿಟ್ಟಿರೋದು ಗೊತ್ತಾಗಿದೆ.
ಕಾಲೋನಿಯ ನಿವಾಸಿಗಳು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾಳೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.