ಮಾನವನ ಹೊಟ್ಟೆಯಲ್ಲಿರುವ ಕಾಂಡದ ಕೋಶಗಳನ್ನು ಇನ್ಸುಲಿನ್ ಉತ್ಪಾದಿಸಬಲ್ಲ ಕೋಶಗಳನ್ನಾಗಿ ಪರಿವರ್ತಿಸಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ತಗ್ಗಿಸಬಹುದು ಎಂದು ಸಂಶೋಧಕರ ತಂಡವೊಂದು ತೋರಿಸಿಕೊಟ್ಟಿದೆ.
ನ್ಯೂಯಾರ್ಕ್‌ನ ವೀಲ್ ಕಾರ್ನೆಲ್ ವೈದ್ಯಕೀಯ ಸಂಸ್ಥೆಯ ತಂಡವೊಂದು ನಡೆಸಿದ ಪ್ರೀಕ್ಲಿನಿಕಲ್ ಸಂಶೋಧನೆಯೊಂದರಲ್ಲಿ ಈ ವಿಚಾರ ಕಂಡು ಬಂದಿದೆ.
ಮಾನವನ ಹೊಟ್ಟೆಯಲ್ಲಿರುವ ಅಂಗಾಂಶದ ಕಾಂಡಕೋಶಗಳನ್ನು ತೆಗೆದುಕೊಂಡು ಅವುಗಳಿಗೆ ಪ್ಯಾಂಕ್ರಿಯಾಟಿಕ್ ಇನ್ಸುಲಿನ್ ಕೋಶಗಳಂತ ಇನ್ಸುಲಿನ್ ಉತ್ಪಾದಿಸುವಂತೆ ಪ್ರೋಗ್ರಾಮಿಂಗ್ ಮಾಡುವ ಮೂಲಕ ಸಕ್ಕರೆ ಕಾಯಿಲೆಯನ್ನು ಗುಣಪಡಿಸುವ ಸಾಧ್ಯತೆಯನ್ನು ಈ ವೇಳೆ ಕಂಡುಕೊಂಡಿದ್ದಾರೆ.
“ಟೈಪ್ 1 ಹಾಗೂ ತೀವ್ರ ಟೈಪ್ 2 ಸಕ್ಕರೆ ಕಾಯಿಲೆಗಳ ರೋಗಿಗಳ ಸ್ವಂತ ಕೋಶಗಳನ್ನು ತೆಗೆದುಕೊಂಡು ಸೂಕ್ತ ಚಿಕಿತ್ಸೆಗೆ ಸದೃಢ ತಳಪಾಯ ಹಾಕುವ ಈ ಅಧ್ಯಯನ ಮಹತ್ವದ್ದಾಗಿದೆ,” ಎಂದು ಹಿರಿಯ ಲೇಖಕ ಡಾ. ಜ಼ೋ ಜ಼ೌ ತಿಳಿಸಿದ್ದಾರೆ.
ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಹಾರ್ಮೋನ್ ಆಗಿರುವ ಇನ್ಸುಲಿನ್ ಇಲ್ಲದೇ ಇದ್ದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ತೀರಾ ಹೆಚ್ಚಾಗಿ ಅನೇಕ ಗಂಭೀರ ಸವಾಲುಗಳು ಸೃಷ್ಟಿಯಾಗುತ್ತವೆ.