
ಬೆಂಗಳೂರು: ಗ್ರಾಮೀಣ ಪ್ರದೇಶದ ಮಕ್ಕಳು ಸೇರಿ ಶಾಲಾ ಮಕ್ಕಳಲ್ಲಿ ಓದು ಮತ್ತು ಕಲಿಕೆಯ ಆಸಕ್ತಿ ಬೆಳೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಓದುವ ಬೆಳಕು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಸೆಪ್ಟಂಬರ್ ನಲ್ಲಿ ‘ನಾನು ಓದುವ ಪುಸ್ತಕ’ ಅಭಿಯಾನ ನಡೆಸಲಾಗುವುದು. ಓದುವ ಬೆಳಕು ಕಾರ್ಯಕ್ರಮದಡಿ ಪ್ರತಿ ತಿಂಗಳು ಉಪಯುಕ್ತ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳಲ್ಲಿ ಓದುವ ಹವ್ಯಾಸ ಉತ್ತೇಜಿಸಲು ನಾನು ಓದುವ ಪುಸ್ತಕ ಅಭಿಯಾನ ಕೈಗೊಳ್ಳಲಾಗಿದೆ. ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳ ಹೆಸರನ್ನು ಪಂಚಾಯಿತಿ ಗ್ರಂಥಾಲಯಗಳಲ್ಲಿ ಪ್ರದರ್ಶಿಸಲಾಗುವುದು. ಗ್ರಂಥಾಲಯ ಮೇಲ್ವಿಚಾರಕರು ಮಕ್ಕಳಿಗೆ ಪುಸ್ತಕ ಓದಲು ಪ್ರೋತ್ಸಾಹ ನೀಡಲಿದ್ದಾರೆ. ಮಕ್ಕಳು ಪುಸ್ತಕ ಓದಿ ಪೂರ್ಣಗೊಳಿಸಿದ ನಂತರ ತಾವು ಓದಿದ ಪುಸ್ತಕಗಳ ಬಗ್ಗೆ ಸೂಚನೆ ಅನ್ವಯ ಮಾಹಿತಿ ನೀಡಬೇಕು. ಮಕ್ಕಳು ಓದಿದ ಪುಸ್ತಕಗಳ ಸಂಖ್ಯೆಯನ್ನು ಗ್ರಂಥಾಲಯದಲ್ಲಿ ಪ್ರದರ್ಶಿಸಲಾಗುವುದು. ಹೆಚ್ಚು ಪುಸ್ತಕ ಓದಿದ ಮಕ್ಕಳ ಹೆಸರನ್ನು ಸೆಪ್ಟೆಂಬರ್ 30ರಂದು ಘೋಷಣೆ ಮಾಡಲಾಗುವುದು.