ಶಿವಮೊಗ್ಗ: ಶಿವಮೊಗ್ಗ ನಗರ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಗ್ರಾಮೀಣ ಮತ್ತು ಪಟ್ಟಣಗಳ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿನ 18 ವರ್ಷ ಮೇಲ್ಪಟ್ಟ ಸುಮಾರು 16,000 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗುರುವಾರದಿಂದ ಉಚಿತ ಲಸಿಕೆಯನ್ನು ಹಾಕಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಎಂ.ಪಿ.ಎಲ್. ಸ್ಪೋರ್ಟ್ಸ್ ಫೌಂಡೇಶನ್, ಸೇವಾಭಾರತಿ, ಪೆಸಿಟ್ ವಿದ್ಯಾಸಂಸ್ಥೆ, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಯ ಅರ್ಹ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳನ್ನು ಕರೆತರಲು ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಶಾಲಾ-ಕಾಲೇಜುಗಳ ಆರಂಭಗೊಳ್ಳುವ ಪೂರ್ವದಲ್ಲಿ ಸರ್ಕಾರದ ನಿರೀಕ್ಷೆಯಂತೆ ಅರ್ಹರಾದ ಎಲ್ಲಾ ವಿದ್ಯಾರ್ಥಿಗಳಿಗೆ ಕನಿಷ್ಟ ಮೊದಲ ಹಂತದ ಲಸಿಕೆಯನ್ನು ಹಾಕಿಸುವ ಮಹತ್ವದ ಕಾರ್ಯಕ್ಕೆ ಸ್ಥಳೀಯ ಸಂಸ್ಥೆಗಳು ಸಹಕಾರ ನೀಡುತ್ತಿರುವುದು ಹರ್ಷವೆನಿಸಿದೆ. ಇದರಿಂದಾಗಿ ಲಸಿಕಾ ಆಂದೋಲನಕ್ಕೆ ಇನ್ನಷ್ಟು ವೇಗ ದೊರೆಯಲಿದೆ. ಅಂತೆಯೇ ಈ ಸಂಘಟನೆಗಳ ವತಿಯಿಂದ ಕೋವಿಡ್ ಸಂಕಷ್ವದ ಸಂದರ್ಭದಲ್ಲಿ ಜಿಲ್ಲೆಯ ಸುಮಾರು 25,000 ಬಡವರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಗಿತ್ತು. ಅಲ್ಲದೆ ಅರ್ಹರಿಗೆ ಆಯುಷ್ಮಾನ್ ಕಾರ್ಡನ್ನು ಕೊಡಿಸುವಲ್ಲಿ ಸಕ್ರಿಯವಾಗಿತ್ತು ಎಂದು ಹೇಳಿದರು.
ಈಗಾಗಲೆ ಜಿಲ್ಲೆಯಲ್ಲಿ 4.48 ಲಕ್ಷ ಮಂದಿಗೆ ಮೊದಲ ಹಂತದ ಹಾಗೂ 88,000 ಮಂದಿಗೆ ಎರಡನೇ ಲಸಿಕೆ ಹಾಕಲಾಗಿದೆ ಎಂದ ಅವರು, ಜಿಲ್ಲೆಯ ಸರ್ಕಾರಿ, ಅನುದಾನಿತ ಪ್ರಥಮ ದರ್ಜೆ, ಬಿ.ಎಡ್., ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗುವುದು. ಈ ಆಂದೋಲನ ಗುರುವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ವರ್ಚುಯಲ್ ವಿಡಿಯೋ ಮೂಲಕ ಉದ್ಘಾಟನೆ ಮಾಡಲಿದ್ದಾರೆ ಎಂದರು.
ದೇಶದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಾಗಿರುವಂತೆಯೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಪ್ರಯೋಜನ ಪಡೆದುಕೊಳ್ಳವಂತೆ ಸಂಸದರು ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಹಾನಗರಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಎಂ.ಪಿ.ಎಲ್ ಸಂಸ್ಥೆಯ ಮುಖ್ಯಸ್ಥ ಸುರೇಶ್ ವೈದ್ಯನಾಥನ್, ಜಗದೀಶ್ ರಾಜನ್, ಉಪಮೇಯರ್ ಗನ್ನಿಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ನಾಗರಾಜ್, ವರ್ಗೀಸ್, ಯಾದವಕೃಷ್ಣ, ಗಿರೀಶ್ ಕಾರಂತ್, ಬಳ್ಳಕೆರೆ ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.