ತುಮಕೂರು: ಶಾಲಾ ಮಕ್ಕಳಿಗೆ ನೀಡುತ್ತಿದ್ದ ಬಿಸಿ ಊಟ ಇನ್ನು ಮುಂದೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಸಿಗಲಿದೆ. ಮೊದಲ ಬಾರಿಗೆ ತುಮಕೂರು ವಿವಿಯಲ್ಲಿ ಯೋಜನೆ ಜಾರಿಗೆ ಬಂದಿದ್ದು, ನಂತರ ಉಳಿದ ಕಡೆ ಆರಂಭಿಸಲಾಗುವುದು.
ಪಾವಗಡ ರಾಮಕೃಷ್ಣ ಸೇವಾಶ್ರಮ, ಬೆಂಗಳೂರಿನ ಅದಮ್ಯ ಚೇತನ, ತುಮಕೂರು ಸಾಯಿಬಾಬಾ ಮಂದಿರ, ರೆಡ್ ಕ್ರಾಸ್ ಮೊದಲಾದ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ವಿವಿ ಆಡಳಿತ ಮಂಡಳಿ ಬಿಸಿಯೂಟ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಬೆಳಗುಂಬ ರಸ್ತೆಯ ಸಾಯಿಬಾಬಾ ಮಂದಿರದಲ್ಲಿ ಊಟ ತಯಾರಿಸಿ ಮಧ್ಯಾಹ್ನ ವಿವಿ ಆವರಣದಲ್ಲಿ ಊಟ ವಿತರಿಸಲಾಗುವುದು. ವಿವಿ ಆವರಣದಲ್ಲಿ ಕಲಿಯುತ್ತಿರುವ 1200 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. 5 ರೂಪಾಯಿಗೆ ಊಟ ನೀಡಲು ತೀರ್ಮಾನಿಸಿದ್ದು, ದಾನಿಗಳ ನೆರವೇರಿನಿಂದ ನಿರ್ವಹಣೆಯ ಸಂಪೂರ್ಣ ವೆಚ್ಚ ಭರಿಸಲಾಗುತ್ತದೆ. ಸಂಘ-ಸಂಸ್ಥೆಗಳು ನಿರ್ವಹಣೆ ಮಾಡಲಿದ್ದು, ವಿಶ್ವವಿದ್ಯಾನಿಲಯದಿಂದ ಸ್ಥಳಾವಕಾಶ ಹಾಗೂ ಅಗತ್ಯವಾದಲ್ಲಿ ಸಿಬ್ಬಂದಿ ಒದಗಿಸಲಾಗುವುದು.
ಹಾಸ್ಟೆಲ್ ಸೌಲಭ್ಯವಿಲ್ಲದೆ ಹೆಚ್ಚಿನ ವಿದ್ಯಾರ್ಥಿಗಳು ಊಟ ಮಾಡದೆ ಕಲಿಯುತ್ತಾರೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಾಧ್ಯಾಪಕರು ಯೋಜನೆ ರೂಪಿಸುವಲ್ಲಿ ಕಾಳಜಿ ವಹಿಸಿದ್ದಾರೆ. ಗ್ರಾಮೀಣ ಮತ್ತು ಬಡವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ವಿವಿ ಮುಂದಾಗಿದ್ದು, ಮೊದಲ ಹಂತದಲ್ಲಿ 1,200 ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುವುದು ಎಂದು ಹೇಳಲಾಗಿದೆ.