ಮಂಗಳೂರು: ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿದ ಪ್ರಕರಣ ಇತ್ತೀಚೆಗೆ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ವಿದ್ಯಾರ್ಥಿಗಳಿಂದ ಶೌಚಾಲಯ ಕ್ಲೀನ್ ಮಾಡಿಸಿದ್ದಕ್ಕೆ ಮುಖ್ಯಶಿಕ್ಷಕರನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೇ ಶಿಕ್ಷಣ ಇಲಾಖೆಯಿಂದ ಹೊಸ ನಿಯಮವೂ ಜಾರಿಯಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೇ ಪ್ರಕರಣಗಳ ವಿಚಾರವಾಗಿ ಸ್ಪೀಕರ್ ಯು.ಟಿ.ಖಾದರ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ.
ಮೂಡಬಿದರೆಯಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯ ಕ್ಲೀನ್ ಮಾಡಿದರೆ ತಪ್ಪಿಲ್ಲ ಎಂದು ಹೇಳಿದ್ದಾರೆ. ಸ್ಪೀಕರ್ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಶಾಲೆಯಲ್ಲಿ ವಿದ್ಯಾರ್ಥಿಗಳು ಅಗತ್ಯ ಸಾಧನಗಳನ್ನು ಬಳಸಿಕೊಂಡು ಕಸ ಗುಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪಲ್ಲ, ಇದು ಕೂಡ ಶಿಕ್ಷಣದ ಒಂದು ಭಾಗ. ಚಿಕ್ಕಂದಿನಿಂದಲೇ ಈ ಬಗ್ಗೆ ತಿಳಿದಿರುವುದು ಕೂಡ ಉತ್ತಮ ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಕಸ ಗುಡಿಸಲು, ಶೌಚಾಲಯ ಸ್ವಚ್ಚತೆಗೆ ಪ್ರತ್ಯೇಕ ಸಿಬ್ಬಂದಿಗಳು ಇರುವುದಿಲ್ಲ. ಅಲ್ಲಿ ವಿದ್ಯಾರ್ಥಿಗಳು ಆ ಕೆಲಸ ಮಾಡುವುದು ಸಹಜ. ಕೈಗವಸು ಹಾಕಿ, ಬ್ರಷ್ ಬಳಸಿ ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪಲ್ಲ. ಚಿಕ್ಕಂದಿನಲ್ಲಿ ನಾನೂ ಈ ಕೆಲಸ ಮಾಡಿದ್ದೆ ಎಂದಿದ್ದಾರೆ.