ಬೆಂಗಳೂರು: ರಾಜ್ಯಾದ್ಯಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಗುರುವಾರ ನಡೆದ ಮೊದಲ ದಿನದ ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ರಮದಲ್ಲಿ ಇಲ್ಲದ 21 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಜೀವಶಾಸ್ತ್ರದ 10 ಪ್ರಶ್ನೆಗಳು, ಗಣಿತ ವಿಷಯದ 11 ಪ್ರಶ್ನೆಗಳನ್ನು ಔಟ್ ಆಫ್ ಸಿಲಬಸ್ ಕೇಳಲಾಗಿದೆ ಎಂದು ಹೇಳಲಾಗಿದೆ.
ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಿದ ಸಿಇಟಿ ಪರೀಕ್ಷೆ ಮೊದಲ ದಿನ ಜೀವಶಾಸ್ತ್ರ, ಗಣಿತದ ವಿಷಯದಲ್ಲಿ 21 ಪ್ರಶ್ನೆಗಳು ಔಟ್ ಆಫ್ ಸಿಲೆಬಸ್ ಆಗಿವೆ. ಪೋಷಕರು ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಪರೀಕ್ಷೆಗಳು ನಡೆಯಲಿದ್ದು, ಅದರಲ್ಲಿಯೂ ಇದೆ ರೀತಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಿದರೆ ಹೇಗೆ ಎಂಬ ಆತಂಕ ವಿದ್ಯಾರ್ಥಿಗಳಲ್ಲಿದೆ.
ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಲಾಗಿದೆ. ಗ್ರಾಮೀಣ ಪ್ರದೇಶ, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತದೆ. ಮರು ಪರೀಕ್ಷೆ, ಕೃಪಾಂಕ ನೀಡಿಕೆ, ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆ ಕೈಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರ ಪರಿಗಣಿಸುವುದು ಸಮಸ್ಯೆಗೆ ಪರಿಹಾರವಾಗಬಹುದು ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ರಮ್ಯಾ, ಪಠ್ಯದಿಂದ ಹೊರಗಿನ ಪ್ರಶ್ನೆಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ವಿಷಯ ತಜ್ಞರ ತಂಡ ಪರಿಶೀಲನೆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.