ಬೆಂಗಳೂರು : ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗೆ Adult Prompterನ್ನು ನೇಮಿಸಿಕೊಳ್ಳುವ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಸದರಿ ಪರೀಕ್ಷೆಗೆ ಹಾಜರಾಗುವ ವಿಭಿನ್ನ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಉಲ್ಲೇಖಿತ ಸರ್ಕಾರಿ ಆದೇಶದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ವಿಭಿನ್ನ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಲ್ಲಿ ಆಟಿಸಂ ಸ್ಪೆಕ್ಷಮ್ ಡಿಸಾರ್ಡರ್ (ASD) ಕೂಡ ಒಂದು ಪ್ರಕಾರವಾಗಿದೆ. ಇಂತಹ ಮಕ್ಕಳು ಮೆದುಳಿನ ಅಸಮರ್ಥತೆಯಿಂದಾಗಿ ತಮ್ಮ ಭಾವನೆಗಳು ಮತ್ತು ತಿಳುವಳಿಕೆಯನ್ನು ವ್ಯಕ್ತಪಡಿಸಲು ಅಸಮರ್ಥರಾಗಿರುತ್ತಾರೆ. ಈ ಮಕ್ಕಳಲ್ಲಿ ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಂವಹನ ಮತ್ತು ಅಭಿವ್ಯಕ್ತಿ ಸಾಮರ್ಥ್ಯದ ಕೊರತೆ, ದುರ್ಬಲ ಸಾಮಾಜಿಕ ಕೌಶಲ್ಯ, ಸಾಮಾಜಿಕ ಸಂವಹನದ ಕೊರತೆ, ಉದ್ವಿಗ್ನತೆಗೆ ಒಳಗಾಗುವುದು. ಇತರೆ ಮಕ್ಕಳೊಂದಿಗೆ ಬೆರೆಯದಿರುವುದು. ಮಂದಗತಿಯ ಮಾತುಗಾರಿಕೆ, ಪದಗಳ ಪರಿಚಯವಿಲ್ಲದಿರುವಿಕೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸಲು ಗಮನ ಸೆಳೆಯುವುದಕ್ಕೆ Adult Prompterನ್ನು ಒದಗಿಸುವಂತೆ ಮಂಡಲಿಗೆ ಮನವಿ ಸ್ವೀಕೃತವಾಗಿರುತ್ತದೆ. ಈ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಪ್ರತ್ಯೇಕ ಕೊಠಡಿ ಹಂಚಿಕೆ ಮಾಡಿ, ಪರೀಕ್ಷೆ ಬರೆಯುವ ಸಂದರ್ಭದಲ್ಲಿ ನಿಷ್ಕ್ರಿಯೆಗೊಳ್ಳದಂತೆ ಕ್ರಮಕೈಗೊಂಡು ಈ ಮಕ್ಕಳು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಅನುವು ಮಾಡಿಕೊಡಬೇಕಾಗಿದೆ. ಇಂತಹ ಕೊಠಡಿಗಳಲ್ಲಿ “ವಯಸ್ಕ ಪ್ರೋತ್ಸಾಹಕ (Adult Prompter)” ಆಗಿ ವಿದ್ಯಾರ್ಥಿಯ ಶಿಕ್ಷಕರು/ಪರಿಚಿತವಿರುವ ವಯಸ್ಕರನ್ನು ನೇಮಕ ಮಾಡಿಕೊಳ್ಳಲು ಮಂಡಲಿ ಅನುಮತಿ ನೀಡಿದೆ.
ಮುಂದುವರೆದು, ವಿದ್ಯಾರ್ಥಿಯು ಆಟಿಸಂ ಸಮಸ್ಯೆ ಹೊಂದಿರುವ ಬಗ್ಗೆ ವೈದ್ಯಕೀಯ ಪ್ರಮಾಣಪತ್ರವನ್ನು ಮಂಡಲಿಯ ಮಾರ್ಗಸೂಚಿಯ ಪುಟ ಸಂಖ್ಯೆ:20ರ ಕ್ರಮ ಸಂಖ್ಯೆ:2ರಲ್ಲಿರುವ ನಿಯಮಗಳನ್ವಯ ಪಡೆಯುವುದು. ಸದರಿ ಪ್ರಮಾಣ ಪತ್ರವನ್ನು ಶಾಲಾ ಮುಖ್ಯ ಶಿಕ್ಷಕರ ಮೂಲಕ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು (ಆಡಳಿತ)ರವರಿಗೆ ಸಲ್ಲಿಸಿ ಅನುಮತಿಯನ್ನು ಪಡೆದು ಮಂಡಲಿಯ ಮಾರ್ಗಸೂಚಿ ಪುಟ ಸಂಖ್ಯೆ:21ರ ಕ್ರಮ ಸಂಖ್ಯೆ:2ರಲ್ಲಿ ತಿಳಿಸಿರುವಂತೆ ಹೆಚ್ಚುವರಿ ಸಮಯ ಹಾಗೂ ಪುಟ ಸಂಖ್ಯೆ:22ರ ಕ್ರಮ ಸಂಖ್ಯೆ3ರಲ್ಲಿ ತಿಳಿಸಿರುವಂತೆ ಪ್ರತ್ಯೇಕ ಪರೀಕ್ಷಾ ಕೊಠಡಿಯನ್ನು ವ್ಯವಸ್ಥೆ ಮಾಡುವುದು.
ನೇಮಕಗೊಂಡ Adult Prompter ಪರೀಕ್ಷಾ ಕೊಠಡಿಯಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳು:
- ಪರೀಕ್ಷಾ ಕೊಠಡಿಯ ವಾತಾವರಣವು ಯಾವುದೇ ಗದ್ದಲವಿಲ್ಲದೆ ಪ್ರಶಾಂತವಾಗಿರುವಂತೆ ನೋಡಿಕೊಳ್ಳುವುದು.
- ಮಕ್ಕಳನ್ನು ಪರೀಕ್ಷಾ ಕೊಠಡಿಯಲ್ಲಿ ಗಮನಿಸುತ್ತಾ, ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಮಕ್ಕಳ ಗಮನವು ನಿಷ್ಕ್ರಿಯಗೊಳ್ಳದಂತೆ/ಬೇರೆಡೆಗೆ ಹೋಗದಂತೆ ಗಮನಹರಿಸುವುದು.
- ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಪ್ರಶ್ನೆಯನ್ನು ಓದಲು, ಉತ್ತರಿಸಲು ಹಾಗೂ ಮುಂದಿನ ಪ್ರಶ್ನೆಗೆ ಉತ್ತರಿಸಲು ಗಮನವನ್ನು ಸೆಳೆದು ಅಗತ್ಯ ಮಾರ್ಗದರ್ಶನ ನೀಡುವುದು.
- ವಿದ್ಯಾರ್ಥಿಯ ಮಾರ್ಗದರ್ಶನಕ್ಕಾಗಿ ನೇಮಕಗೊಂಡಿರುವ Prompter/ಪ್ರೋತ್ಸಾಹಕರು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗೆ ಉತ್ತರವನ್ನು ಹೇಳುವುದಾಗಲೀ ಅಥವಾ ಉತ್ತರವನ್ನು ಸ್ವತ: ಬರೆಯುವುದಾಗಲೀ ಮಾಡಬಾರದು.
ಈ ಮೇಲಿನ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಅನುಪಾಲನೆ ಮಾಡಿ, ಆಟಿಸಂ ಸಮಸ್ಯೆ ಹೊಂದಿರುವ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಯಾವುದೇ ಆತಂಕ ಮತ್ತು ಗೊಂದಲಕ್ಕೆ ಒಳಗಾಗದೇ ಸುಲಲಿತವಾಗಿ ಪರೀಕ್ಷೆ ಬರೆಯಲು ಅಗತ್ಯ ಕ್ರಮವಹಿಸಲು ಸೂಚಿಸಿದೆ.