ಬೆಂಗಳೂರು: ಕೊರೋನಾ ನಡುವೆಯೂ ಇಂದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ, ಮುಂದಿನ ಶಿಕ್ಷಣಕ್ಕೆ ಮುನ್ನುಡಿಯಾದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದ್ದು, ಬಹು ಆಯ್ಕೆ ಪ್ರಶ್ನೆಗಳೊಂದಿಗೆ ಹೊಸ ವಿಧಾನದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟು 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಒಟ್ಟು 14,929 ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ ವಿಷಯವಾರು ತಲಾ 40 ಅಂಕಗಳಿಗೆ ಬಹು ಆಯ್ಕೆ ವಿಧಾನ ಪದ್ಧತಿಯಲ್ಲಿ ಪರೀಕ್ಷೆ ನಡೆಯುತ್ತಿದೆ. 40 ಅಂಕಗಳಿಗೆ ವಿದ್ಯಾರ್ಥಿಗಳು ಗಳಿಸಿದ ಅಂಕವನ್ನು ಒಟ್ಟು 80 ಅಂಕಗಳಿಗೆ ಬದಲಾಯಿಸಿ 20 ಆಂತರಿಕ ಅಂಕಗಳನ್ನು ನೀಡಿದ ಒಟ್ಟು 100 ಅಂಕಗಳಿಗೆ ಫಲಿತಾಂಶ ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ಅನುಕೂಲವಾದ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆದ 1.29 ಲಕ್ಷ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಸೋಂಕಿನ ಲಕ್ಷಣ ಕಂಡು ಬಂದ ಮಕ್ಕಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಎಸ್ಎಸ್ಎಲ್ಸಿ ಮಕ್ಕಳಿಗೆ ಕೊರೋನಾ ವರದಾನವಾಗಿದೆ. ಯಾರೂ ಅನುತ್ತೀರ್ಣರಾಗುವುದಿಲ್ಲ. ಪರೀಕ್ಷೆ ಬರೆಯುವ ಮಕ್ಕಳಿಗೆ ಶುಭವಾಗಲಿ.