
ಹೌದು, ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಲಹರ್ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಪುಸ್ತಕಗಳನ್ನು ಪಕ್ಕದಲ್ಲಿಯೇ ಇಟ್ಟುಕೊಂಡು ಉತ್ತರಕ್ಕಾಗಿ ಅದನ್ನು ನೋಡುವ ಮೂಲಕ ಪರೀಕ್ಷೆ ಬರೆದಿದ್ದಾರೆ. ಇನ್ನೂ ಒಂದು ವಿಶೇಷ ಅಂದರೆ ಶಿಕ್ಷಕರ ಸಮ್ಮುಖದಲ್ಲಿಯೇ ಈ ಸಾಮೂಹಿಕ ನಕಲು ಕಾರ್ಯಕ್ರಮ ನಡೆದಿದೆ.
ಜಿವಾಜಿ ವಿಶ್ವವಿದ್ಯಾಲಯದ ಬಿಎ ಹಾಗೂ ಬಿ ಎಸ್ ಸಿ ಪರೀಕ್ಷೆಗಳು ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಜಾರೋಷವಾಗಿಯೇ ನಕಲು ಮಾಡುತ್ತಿದ್ದು, ಅದನ್ನು ರೆಕಾರ್ಡ್ ಮಾಡುತ್ತಿದ್ದರೂ ಸಹ ಕೇರ್ ಮಾಡಿಲ್ಲ. ಈ ಕಾಲೇಜಿನಲ್ಲಿ ಇಂತಹ ಘಟನೆ ಸಾಮಾನ್ಯ ಎಂದು ಹೇಳಲಾಗಿದೆ.
ಸಾಮೂಹಿಕ ನಕಲಿನ ವಿಡಿಯೋ ವೈರಲ್ ಆದ ಬಳಿಕ ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಂಶುಪಾಲರು, ಆ ಸಂದರ್ಭದಲ್ಲಿ ನಾನಿರಲಿಲ್ಲ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಜಿವಾಜಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಹ ಕ್ರಮ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.