ಮೈಸೂರು: ಮೂರು ವರ್ಷದ ಪದವಿ ಕೋರ್ಸ್ ಗಳಲ್ಲಿ ಕೊನೆಯ ವರ್ಷ ಕೌಶಲಾಧಾರಿತ ವಿಷಯಗಳ ತರಬೇತಿ ನೀಡಲು ಇಂಟರ್ನ್ ಶಿಪ್ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಕ್ರಾಫರ್ಡ್ ಭವನದಲ್ಲಿ ಭಾನುವಾರ ಮೈಸೂರು ವಿವಿ 104ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಪದವಿ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಗಳ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಐಎಎಸ್ ಅಧಿಕಾರಿಗಳ ತಂಡ ಸ್ಥಾಪನೆ ಮಾಡಿರುವ ಕ್ರಿಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ನೀಡಿ ಮಾಸಿಕ 11 ರಿಂದ 17,000 ರೂ. ತರಬೇತಿ ಭತ್ಯೆ ನೀಡಲಾಗುವುದು. ಉನ್ನತ ಶಿಕ್ಷಣದಲ್ಲಿ ಬದಲಾವಣೆಗೆ ಸರ್ಕಾರ ಯೋಜನೆ ರೂಪಿಸಿದ್ದು, ಅಮೆರಿಕದ ರಮೇಶ್ ವಾಗ್ವಾನಿ ಫೌಂಡೇಶನ್ ನೊಂದಿಗೆ ಮೂರು ಬಿಲಿಯನ್ ಡಾಲರ್ ಯೋಜನೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಎಲ್ಲಾ ವಿವಿಗಳ ಬೋಧಕರು ವೃತ್ತಿಪರ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.