ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯ ಕಲ್ಪಿಸಲು 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ವರ್ಷದಿಂದಲೇ ಯೋಜನೆ ಅನುಷ್ಠಾನವಾಗಲಿದ್ದು, ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳ ರೀತಿಯಲ್ಲಿಯೇ ಪ್ರೌಢಶಾಲೆಗಳಲ್ಲಿ ವಿಜ್ಞಾನ ಕಲಿಕೆಗೆ ಒತ್ತು ನೀಡಲಾಗುವುದು.
ವಿಜ್ಞಾನದ ವಿವಿಧ ಪ್ರಾಯೋಗಿಕ ಪಾಠಗಳು ಆರಂಭವಾಗುವುದರಿಂದ ಅದನ್ನು ಅರ್ಥೈಸಲು ಪ್ರಯೋಗಾಲಯ ಅವಶ್ಯಕತೆ ಇದೆ. ಆದರೆ, ಬಹುತೇಕ ಶಾಲೆಗಳಲ್ಲಿ ಸುಸಜ್ಜಿತ ಕೊಠಡಿಗಳಿಲ್ಲ. ಪ್ರಯೋಗಾಲಯಗಳೂ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ಹೊಸದಾಗಿ ಪ್ರಯೋಗಾಲಯ ಕಲ್ಪಿಸಲು ಅನುದಾನ ನೀಡಿದೆ.
ಶಿಕ್ಷಣ ಇಲಾಖೆ ಅಗತ್ಯ ಶಾಲೆಗಳನ್ನು ಗುರುತಿಸಿ ಸೈನ್ಸ್ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಇಂಟರ್ನೆಟ್ ಸೌಲಭ್ಯವನ್ನು ಎರಡು ವರ್ಷಗಳ ಪ್ಯಾಕೇಜ್ ನಲ್ಲಿ ನೀಡಲು ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಬೇಕಿದೆ. ತಾಂತ್ರಿಕ ಸಲಹಾ ಸಮಿತಿ ಸೌಲಭ್ಯ ಒದಗಿಸಲು ಅಗತ್ಯ ಅನುಮೋದನೆ ನೀಡಲಿದೆ.
ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಆರ್ಥಿಕ ಮತ್ತು ಭೌತಿಕ ಗುರಿ ನಿಗದಿಪಡಿಸಿ ಭರಿಸಲಾದ ವೆಚ್ಚದ ವಿವರವನ್ನು ಪ್ರತಿ ತಿಂಗಳು ಹೊಸ ಡಿಜಿಟಲ್ ಸಪೋರ್ಟ್ ಸಿಸ್ಟಮ್ ತಂತ್ರಾಂಶದಲ್ಲಿ ಅಪ್ಡೇಟ್ ಮಾಡಬೇಕಿದೆ.
ರಾಜ್ಯದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 8, 9ನೇ ತರಗತಿಯಲ್ಲಿ ಗಣಿತ, ವಿಜ್ಞಾನ ವಿಷಯ ಕಲಿಕಾ ಸಾಧನೆ ಶೇಕಡ 50ಕ್ಕಿಂತ ಕಡಿಮೆ ಇದೆ ಎಂಬುದು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ 2023ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು.