ಬೆಂಗಳೂರು: ರಾಜ್ಯದಲ್ಲಿ ಒಂದೂವರೆ ವರ್ಷದ ನಂತರ 9 ರಿಂದ 12 ನೇ ತರಗತಿ ಆರಂಭವಾಗಿದ್ದು, ಕಳೆದ ಸೋಮವಾರದಿಂದ ಪ್ರೌಢಶಾಲೆ ಮತ್ತು ಪಿಯುಸಿ ಕಾಲೇಜ್ ಶುರುವಾಗಿವೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹೋಗಿ ಬರಲು ಬಸ್ ಗಳಿಲ್ಲದೆ ಸಮಸ್ಯೆಯಾಗಿದೆ. ಇದನ್ನು ಮನಗಂಡು ಕೂಡಲೇ ಶಾಲಾ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಿ ಬರುವ ಸಮಯಕ್ಕೆ ಅನುಕೂಲವಾಗುವಂತೆ KSRTC ಬಸ್ ಗಳನ್ನು ಓಡಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜಿಗೆ ಬರುತ್ತಿರುವುದರಿಂದ ಅವರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ 600 ಬಸ್ ಗಳನ್ನು ಕಾರ್ಯಾಚರಣೆಗೊಳಿಸಿದ್ದು ಇನ್ನೂ ಹೆಚ್ಚಿನ ಬಸ್ ಗಳನ್ನು ಓಡಿಸಲಾಗುವುದು ಎಂದು ಹೇಳಲಾಗಿದೆ.
ಇನ್ನು ಸೆ. 15 ರೊಳಗೆ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇದುವರೆಗೆ ಶೇಕಡ 54.74 ರಷ್ಟು ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ ಮಾಡಿದ್ದು, ಉಳಿದ ಪುಸ್ತಕಗಳನ್ನು ಕೂಡ ಆದಷ್ಟು ಶೀಘ್ರವೇ ಪೂರೈಕೆ ಮಾಡುವುದಾಗಿ ಕರ್ನಾಟಕ ಪಠ್ಯಪುಸ್ತಕ ಸಂಘ ತಿಳಿಸಿದ್ದು, ಎಲ್ಲ ಶಾಲೆಗಳಿಗೆ ಸೆಪ್ಟೆಂಬರ್ 15 ರೊಳಗೆ ಪಠ್ಯಪುಸ್ತಕ ಪೂರೈಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.