
ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಕಿರು ಪರೀಕ್ಷೆ ನಡೆಸುವ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರಾಜ್ಯಮಟ್ಟದಲ್ಲಿ ಅರ್ಧವಾರ್ಷಿಕ ಪರೀಕ್ಷೆ ನಡೆಸಲು ಚಿಂತನೆ ನಡೆದಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ರಾಜ್ಯಮಟ್ಟದಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ನಡೆಸುವುದರಿಂದ ವಾರ್ಷಿಕ ಪರೀಕ್ಷೆ ನಡೆಯದಿದ್ದರೆ ಫಲಿತಾಂಶ ಪ್ರಕಟಿಸಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ತಿಂಗಳಿಗೊಮ್ಮೆ ಕಿರುಪರೀಕ್ಷೆ ನಡೆಸುವುದರಿಂದ ನಿರಂತರ ಮೌಲ್ಯಮಾಪನದ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಳ ಮಾಡಬಹುದು. ಅಲ್ಲದೇ ಕೊರೋನಾದಂತಹ ಪರಿಸ್ಥಿತಿ ಎದುರಾದರೆ ಅಂತಿಮ ಫಲಿತಾಂಶ ಪ್ರಕಟಿಸಲು ಕೂಡ ಇದರಿಂದ ಅನುಕೂಲವಾಗುತ್ತದೆ. ಈ ಕಾರಣಕ್ಕೆ ಕಾಲೇಜು ಹಂತದಲ್ಲಿ ಕಿರುಪರೀಕ್ಷೆ ನಡೆಸಿ ರಾಜ್ಯ ಮಟ್ಟದಲ್ಲಿ ಅರ್ಧವಾರ್ಷಿಕ ಪರೀಕ್ಷೆ ನಡೆಸುವ ಚಿಂತನೆ ಇದೆ ಎಂದು ಹೇಳಲಾಗಿದೆ.