ಬೇಲೂರು: ಶಕ್ತಿ ಯೋಜನೆ ಜಾರಿಯಾದಾಗಿನಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಗಳು ಫುಲ್ ರಶ್ ಆಗಿ ಬರುವುದರಿಂದ ವಿದ್ಯಾರ್ಥಿಗಳಿಗೆ ಬಸ್ ಗಳನ್ನು ನಿಲ್ಲಿಸದೇ ಸಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜು, ಪರೀಕ್ಷಾ ಕೇಂದ್ರಗಳಿಗೆ ತೆರಳಲಾಗದೇ ಸಮಸ್ಯೆ ಎದುರಿಸುವಂತಾಗಿದೆ.
ಬಸ್ ಅವಾಂತರದಿಂದ ಬೇಸತ್ತ ವಿದ್ಯಾರ್ಥಿಗಳು ಬೇಲೂರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಹಾಸನ, ಬೇಲೂರು ಭಾಗದಿಂದ ಚಿಕ್ಕಮಗಳೂರಿಗೆ ತೆರಳಬೇಕಿರುವ ವಿದ್ಯಾರ್ಥಿಗಳು ಕಳೆದ ಒಂದು ವಾರದಿಂದ ಬಸ್ ಗಳಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ.
ಪರೀಕ್ಷೆ ಸಂದರ್ಭದಲ್ಲಿಯೂ ಈ ರೀತಿ ಸಮಸ್ಯೆಯಾಗುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಇಂದು ಪರೀಕ್ಷೆ ನಿಗದಿಯಾಗಿದೆ. ನಾಲ್ಕು ದಿನಗಳ ಹಿಂದೆಯೇ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಮನವಿ ಮಾಡಿದ್ದೆವು ಆದಾಗ್ಯೂ ಸಂಬಂಧಪಟ್ಟ ಅಧಿಕಾರಿಗಳು ಬಸ್ ಬಿಟ್ಟಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಬಸ್ ಗಳಿಲ್ಲದೇ ಪರದಾಡಿದ ವಿದ್ಯಾರ್ಥಿಗಳು ನೇರವಾಗಿ ಬೇಲೂರು ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಸಾರಿಗೆ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.