ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಯನ್ನು ರದ್ದುಗೊಳಿಸಲು ಆಗ್ರಹಿಸಿ ವಿದ್ಯಾರ್ಥಿಗಳು ರೈಲು ತಡೆಯುವ ಮೂಲಕ ಪ್ರತಿಭಟನೆ ನಡೆಸಿರುವ ಘಟನೆ ಕೊಲ್ಕತ್ತಾದ ಸೀಲ್ದಾಹ್ ದಕ್ಷಿಣ ವಿಭಾಗದ ಗೌರ್ದಾಹ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಗೌರ್ದಾಹ್ ನಾರಾಯಣಪುರ ಅಕ್ಷಯ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಈ ರೈಲು ತಡೆ ನಡೆಸಿದ್ದು, ಈ ಶಾಲೆಯ ಐದು ಮಂದಿ ಶಿಕ್ಷಕರನ್ನು ಒಮ್ಮೆಲೇ ವರ್ಗಾವಣೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಇದು ವಿದ್ಯಾರ್ಥಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಹೀಗಾಗಿ ಸಮವಸ್ತ್ರ ಸಮೇತರಾಗಿ ರೈಲು ನಿಲ್ದಾಣಕ್ಕೆ ಬಂದ ವಿದ್ಯಾರ್ಥಿಗಳು ರೈಲನ್ನು ತಡೆಗಟ್ಟಿದ್ದಾರೆ. ಇದರಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು ಪ್ರಯಾಣಿಕರು ಪರದಾಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಒಂದೇ ಶಾಲೆಯ ಐವರು ಶಿಕ್ಷಕರನ್ನು ಒಟ್ಟಿಗೆ ವರ್ಗಾವಣೆ ಮಾಡಿದರೆ ನಮ್ಮ ಕಲಿಕೆಗೆ ತೊಂದರೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಶಿಕ್ಷಕರ ವರ್ಗಾವಣೆಯನ್ನು ರದ್ದುಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ರೈಲು ತಡೆ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದ್ದು, ಪುಟ್ಟ ವಿದ್ಯಾರ್ಥಿಗಳು ನಡೆಸಿರುವ ಈ ಪ್ರತಿಭಟನೆ ಈಗ ದೊಡ್ಡ ಮಟ್ಟದ ಸುದ್ದಿಯಾಗಿದೆ.