ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳಿಗೆ ಇಂದಿನಿಂದ ಏಕಕಾಲಕ್ಕೆ ಪ್ರವೇಶ ಪ್ರಕ್ರಿಯೆ ಶುರುವಾಗಲಿದೆ. ಇದೇ ಮೊದಲ ಬಾರಿಗೆ ಆನ್ಲೈನ್ ಮೂಲಕ ಪ್ರವೇಶ ಪ್ರಕ್ರಿಯೆ ನಡೆಯಲಿದೆ.
ದ್ವಿತೀಯ ಪಿಯುಸಿ ಫಲಿತಾಂಶ ಜೂನ್ 18 ರಂದು ಪ್ರಕಟವಾಗಿದ್ದು, ಫಲಿತಾಂಶ ಪ್ರಕಟವಾದ ಮರುದಿನದಿಂದ ವಿವಿಗಳು, ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿತ್ತು. ಸರ್ಕಾರ ಇದೆ ಮೊದಲ ಬಾರಿಗೆ ಎಲ್ಲಾ ಪದವಿ ಕಾಲೇಜುಗಳು ಮತ್ತು ಸ್ನಾತಕ ಉತ್ತರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ದಾಖಲಾತಿ ಪ್ರಕಟಿಸಿದ್ದು, ಅಧಿಕೃತವಾಗಿ ಜುಲೈ 11 ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ.
ಸರ್ಕಾರ ಸಿದ್ಧಪಡಿಸಿದ ಸಮಗ್ರ ವಿವಿ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ ತಂತ್ರಾಂಶದ ಮೂಲಕ ಪ್ರವೇಶಾತಿ ನಡೆಸುವುದು ಕಡ್ಡಾಯವಾಗಿರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿದ್ದು, ಪದವಿ ಕೋರ್ಸ್ ಪ್ರವೇಶದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಬಹುಶಿಸ್ತೀಯ ಕೋರ್ಸುಗಳ ಆಯ್ಕೆಗೆ ಅವಕಾಶ ಇರುತ್ತದೆ.
ಅಲ್ಲದೇ, ಪದವಿಯನ್ನು ಯಾವುದೇ ವರ್ಷದಲ್ಲಿ ಮೊಟಕುಗೊಳಿಸಿದರೂ ಅದಕ್ಕೆ ಪ್ರಮಾಣ ಪತ್ರ ನೀಡಲಾಗುವುದು. ನಂತರ ಯಾವಾಗ ಬೇಕಾದರೂ ಮೊಟಕುಗೊಳಿಸಿದ ಸೆಮಿಸ್ಟರ್ ನಿಂದದ ಪುನಃ ಓದು ಪ್ರಾರಂಭಿಸಬಹುದು. ಆಗಸ್ಟ್ 15ಕ್ಕೆ ಪ್ರವೇಶ ಪ್ರಕ್ರಿಯೆ ಮುಕ್ತಾಯವಾಗಿ 17 ರಿಂದ ತರಗತಿಗಳು ಶುರುವಾಗಲಿವೆ ಎಂದು ಹೇಳಲಾಗಿದೆ.