ನವದೆಹಲಿ: ವಿದ್ಯಾರ್ಥಿಗಳಿಗೆ ಕಲಿಯುವಾಗಲೇ ಕೆಲಸ ನೀಡಲಾಗುವುದು. ಕ್ಯಾಂಪಸ್ ನಲ್ಲೇ ಅರೆಕಾಲಿಕ ಕೆಲಸ ನೀಡಲಾಗುತ್ತದೆ. ವಾರಕ್ಕೆ 20 ಗಂಟೆ ಉದ್ಯೋಗ ಕಲ್ಪಿಸುವ ಕುರಿತಂತೆ ಯುಜಿಸಿ ಕರಡು ವರದಿ ಬಿಡುಗಡೆ ಮಾಡಲಾಗಿದೆ.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಯುವಾಗಲೇ ಗಳಿಸಿರಿ ಎಂಬ ಯೋಜನೆಯನ್ನು ಜಾರಿ ಮಾಡಲು ಯುಜಿಸಿ ಮುಂದಾಗಿದೆ. ಕರಡು ಪ್ರಕಾರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಿಕ್ಷಣ ಕಲಿಯುತ್ತಿರುವ ಕ್ಯಾಂಪಸ್ ನಲ್ಲೇ ಉದ್ಯೋಗ ಒದಗಿಸಲಾಗುವುದು. ಅವರಿಗೆ ಗಂಟೆಗಳ ಆಧಾರದಲ್ಲಿ ವೇತನ ನೀಡಲಾಗುತ್ತದೆ. ಶಿಕ್ಷಣ, ಕೌಶಲ್ಯದ ಜೊತೆಗೆ ಸಂಪಾದನೆಗೆ ಅವಕಾಶವಿದ್ದು, ಶಿಕ್ಷಣ ಪಡೆದುಕೊಳ್ಳಲು ಬಡ ವಿದ್ಯಾರ್ಥಿಗಳ ಕಷ್ಟ ಕಡಿಮೆ ಮಾಡುವ ಗುರಿ ಹೊಂದಲಾಗಿದೆ.
ಇದರೊಂದಿಗೆ ವ್ಯಕ್ತಿತ್ವ, ತಾಂತ್ರಿಕ ಕೌಶಲ್ಯ, ಉದ್ಯಮಶೀಲತಾ ಗುಣ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಪ್ರತಿ ವಾರ ಗರಿಷ್ಠ 20 ಗಂಟೆ ತಿಂಗಳಿಗೆ 20 ದಿನ ತರಗತಿ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಕೆಲಸ ನೀಡಿ ವೇತನ ಕೊಡಲಾಗುವುದು.
2020 ರ ನೂತನ ಶಿಕ್ಷಣ ನೀತಿಯನ್ನು ಆಧರಿಸಿ ಈ ಯೋಜನೆ ರೂಪಿಸಲಾಗಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮತ್ತು ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಗಳನ್ನು ಒದಗಿಸಲಾಗುವುದು ಎಂದು ಹೇಳಲಾಗಿದೆ.