ಬೆಳಗಾವಿ: ಶೀಘ್ರವೇ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಸರ್ಕಾರ ಮುಂದಾಗಿದೆ. ಎಸ್.ಎಸ್.ಎಲ್.ಸಿ. ಮತ್ತು ಮೆಟ್ರಿಕ್ ನಂತರದ ಪ್ರತಿಭಾನ್ವಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಹಿಂದಿನ ವರ್ಷಗಳಿಗಿಂತ ಕೊರೋನೋತ್ತರ ವರ್ಷ 2021 -22, 2022 – 23ರಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಿದ್ದರಿಂದ ಹೆಚ್ಚುವರಿ ಅನುದಾನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರವೇ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿದ್ಯಾರ್ಥಿಗಳ ಖಾತೆಗೆ ಶೀಘ್ರವೇ ಪ್ರೋತ್ಸಾಹ ಧನ ಜಮಾ ಮಾಡಲಾಗುವುದು. ಅನುದಾನ ಕೊರತೆಯಾದಲ್ಲಿ ರಾಜ್ಯ ವಲಯದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರಥಮ ಪ್ರಯತ್ನದಲ್ಲಿಯೇ ಶೇಕಡ 60 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಪ್ರೋತ್ಸಾಹಧನಕ್ಕಾಗಿ 381.87 ಕೋಟಿ ರೂಪಾಯಿ ಅನುದಾನದಲ್ಲಿ 166 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 118 ಕೋಟಿ ರೂ.ಗಳನ್ನು 1.02 ಲಕ್ಷ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪ್ರೋತ್ಸಾಹಧನಕ್ಕೆ ವೆಚ್ಚ ಮಾಡಲಾಗಿದ್ದು, ಉಳಿದ 48 ಕೋಟಿ ರೂ.ಗಳನ್ನು ಮೆಟ್ರಿಕ್ ನಂತರದ ಪ್ರೋತ್ಸಾಹಧನಕ್ಕಾಗಿ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.
ವಿದ್ಯಾರ್ಥಿಗಳ ಅರ್ಜಿಗಳ ಜೇಷ್ಠತೆ ಮಾನದಂಡ ಅನುಸರಿಸಿ ಪ್ರೋತ್ಸಾಹಧನ ಪಾವತಿಸಲಾಗಿದೆ. ಎಲ್ಲಾ ಅರ್ಜಿಗಳಿಗೂ ಪ್ರೋತ್ಸಾಹಧನ ಪಾವತಿಸಲು 49 ಕೋಟಿ ರೂ. ಬೇಡಿಕೆ ಸಲ್ಲಿಕೆಯಾಗಿದ್ದು, ಶೀಘ್ರವೇ ವಿದ್ಯಾರ್ಥಿಗಳ ಖಾತೆಗೆ ಪ್ರೋತ್ಸಾಹ ಧನ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.