ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿರುವ ಡಿಆರ್‌ಡಿಒ ಅನುದಾನಿತ ಕೇಂದ್ರೀಯ ವಿದ್ಯಾಲಯ ಶಾಲೆಗೆ ನೀಡುತ್ತಿರುವ ಧನಸಹಾಯ ನಿಲ್ಲಿಸಲು ಕೇಂದ್ರ ನಿರ್ಧರಿಸಿದೆ. ಇದರಿಂದ ಆಘಾತಕ್ಕೆ ಒಳಗಾಗಿರುವ ಪೋಷಕರು ಹಾಗೂ ವಿದ್ಯಾರ್ಥಿಗಳು ಕೇಂದ್ರದ ನಿರ್ಧಾರದಿಂದ ಶಾಲೆ ಮುಚ್ಚಿ ಹೋಗಬಹುದೆಂಬ ಆತಂಕಕ್ಕೆ ಒಳಗಾಗಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಡೆಸುತ್ತಿರುವ ಯೋಜನೆಗಳಿಗೆ ಹಣ ನೀಡುವುದನ್ನು ನಿಲ್ಲಿಸಲು ಕೇಂದ್ರ ನಿರ್ಧರಿಸಿದೆ. ಹೀಗಾಗಿ ಇತ್ತೀಚೆಗೆ ಸಿವಿ ರಾಮನ್ ನಗರ ಶಾಲೆಗೆ ಈ ಸಂಬಂಧ ಲಿಖಿತ ಸಂವಹನವನ್ನು ಕಳುಹಿಸಿದೆ. ಇದರಿಂದ ಶಾಲಾ ಆಡಳಿತ ಮಂಡಳಿ ಸೇರಿದಂತೆ ವಿದ್ಯಾರ್ಥಿಗಳು ಆಘಾತಕ್ಕೆ ಒಳಗಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ಶಾಲೆಯನ್ನು ಮುಚ್ಚಬಹುದು ಎಂಬ ವದಂತಿಗಳಿಗೆ ಕಾರಣವಾಗಿದೆ.
ಬ್ಯಾಂಕ್ ಗ್ರಾಹಕರೇ ಗಮನಿಸಿ: ಮಾರ್ಚ್ ನಲ್ಲಿ 13 ದಿನ ರಜೆ, RBI ನಿಂದ ಪಟ್ಟಿ ಬಿಡುಗಡೆ
ಈ ಶಾಲೆಯಲ್ಲಿ ಪ್ರಸ್ತುತ 2 ಸಾವಿರಕ್ಕೂ ಹೆಚ್ಚು ಮಕ್ಕಳು ವಿವಿಧ ತರಗತಿಗಳಲ್ಲಿ ಓದುತ್ತಿದ್ದಾರೆ ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆ ತಿಳಿಸಿದೆ. ಕೇಂದ್ರದ ಈ ನಿರ್ಧಾರದ ನಂತರ, ಡಿಆರ್‌ಡಿಒ ಅಡಿಯಲ್ಲಿರುವ ಇತರ ಶಾಲೆಗಳು ತಮ್ಮ ಶಾಲೆಯ ನಿರ್ವಹಣೆಯನ್ನು ಕೇಂದ್ರೀಯ ವಿದ್ಯಾಲಯ ಸಂಘಟನಾ ಶಾಲೆಗಳು ಅಥವಾ ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸಲು ಪ್ರಯತ್ನಿಸುತ್ತಿವೆ. ಬೆಂಬಲದ ಕೊರತೆಯಿಂದಾಗಿ ಕೆಲ ಶಾಲೆಗಳು ಮುಚ್ಚುವ ಅಂಚಿನಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವರ್ಷದ ಮಾರ್ಚ್ 31ನೇ ತಾರೀಖಿನಿಂದ ಡಿಆರ್‌ಡಿಒ ಅನುದಾನಿತ ಶಾಲೆಗಳಿಗೆ ಧನಸಹಾಯ ನಿಲ್ಲಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ ಅಂತಹ ಡಿಆರ್‌ಡಿಒ ಅನುದಾನಿತ ಶಾಲೆಗಳಲ್ಲಿ ಒಂದಾಗಿದೆ. ಮಾರ್ಚ್ 31, 2022 ರ ನಂತರ ಶಾಲೆಯ ನಿರ್ವಹಣಾ ಜವಾಬ್ದಾರಿ ಕೆವಿಎಸ್‌ನಿಂದ ಖಾಸಗಿ ಸಂಸ್ಥೆಗೆ ಬದಲಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಕಳುಹಿಸಿರುವ ಪತ್ರದಲ್ಲಿ ತಿಳಿದು ಬಂದಿದೆ.
ಈ ನಿರ್ಧಾರದಿಂದ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಬೆಂಗಳೂರಿನ ವಿವಿಧ ಡಿಆರ್‌ಡಿಒ ಲ್ಯಾಬ್‌ಗಳಿಗೆ ಸೇವಾ ವ್ಯಕ್ತಿಗಳಾಗಿ ಅವರನ್ನ ನಿಯೋಜಿಸಲಾಗುವುದು. ಕೆಲವು ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಅವಧಿಗೆ ವರ್ಗಾವಣೆಯಾಗುವುದು ಖಚಿತ, ಆದರೂ ಇವರೆಲ್ಲರ ವರ್ಗಾವಣೆ KVS/AWES ನ ಅಧೀನದಲ್ಲಿರಲಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2022-23ರ ಶೈಕ್ಷಣಿಕ ವರ್ಷದಲ್ಲಿ, ನಗರದೊಳಗಿನ ವರ್ಗಾವಣೆಯನ್ನು ಸ್ವೀಕರಿಸಲು ಇತರ ಕೇಂದ್ರೀಯ ವಿದ್ಯಾಲಯ ಶಾಲೆಗಳಿಗೆ ಮನವಿ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆವಿಎಸ್‌ನ, ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಆಯುಕ್ತ ಡಾ ಎನ್. ವಸಂತ್, ಈ ಬೆಳವಣಿಗೆ ಬಗ್ಗೆ ನನಗೆ ತಿಳಿದಿಲ್ಲ ಎಂದಿದ್ದಾರೆ. ಶಾಲೆಯನ್ನು ಮುಚ್ಚಲು ಬಿಡದೆ ಮುಂದುವರೆಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಶಾಲೆಯ ಮೂಲಗಳು ಖಚಿತಪಡಿಸಿವೆ. ಜೊತೆಗೆ ಈ ಸಂಬಂಧ ಡಿಆರ್‌ಡಿಒ ಪ್ರಧಾನ ಕಚೇರಿಗೆ ಪತ್ರ ಬರೆಯಲಿದ್ದೇವೆ ಎಂದು ಶಾಲೆಯ ಮೂಲಗಳು ತಿಳಿಸಿವೆ.