ಹಾಸನ: ಬಿಸಿಯೂಟದಲ್ಲಿ ಹಲ್ಲಿ ಬಿದ್ದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಹಾಸನ ಜಿಲ್ಲೆ ರಾಗಿಮರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಅರಕಲಗೂಡು ತಾಲೂಕಿನ ರಾಗಿಮರೂರಿನ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಅವರನ್ನು ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಅರಕಲಗೂಡು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತೀವ್ರ ಅಸ್ವಸ್ಥಗೊಂಡ 8 ಮಕ್ಕಳನ್ನು ಹಾಸನ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಹಲ್ಲಿ ಬಿದ್ದು ಕಲುಷಿತಗೊಂಡ ಆಹಾರ ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ವಾಂತಿಯಿಂದ ಬಳಲುತ್ತಿದ್ದವರ ಮಕ್ಕಳನ್ನು ಶಿಕ್ಷಕರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಬಿಸಿಯೂಟದ ವೇಳೆ ಸುರಕ್ಷತಾ ಕ್ರಮ ವಹಿಸಿದ ಶಾಲಾ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.