ವಿದ್ಯಾರ್ಥಿ ಜೀವನದಲ್ಲಿ ಗುರುಗಳ ಪಾತ್ರ ಬಹುಮುಖ್ಯವಾಗಿರುತ್ತೆ. ವಿದ್ಯಾರ್ಥಿಗಳ ಭವಿಷ್ಯ ಸುಭದ್ರವಾಗಿರಲು ಓರ್ವ ಗುರು ಹಾಕುವ ಪರಿಶ್ರಮ ಅಷ್ಟಿಷ್ಟಲ್ಲ. ಕೆಲ ಗುರುಗಳು ವಿದ್ಯಾರ್ಥಿಗಳ ಜೀವನದಲ್ಲಿ ಎಷ್ಟು ಗಾಢವಾಗಿ ನೆಲೆಯೂರಿರುತ್ತಾರೆ ಅಂದ್ರೆ, ಓರ್ವ ಗೆಳೆಯ, ಸಲಹೆಗಾರ, ಮಾರ್ಗದರ್ಶಕನೂ ಆಗಿರುತ್ತಾನೆ. ಅಂತಹ ಗುರು ಒಮ್ಮಿಂದೊಮ್ಮೆಲೆ ಬೇರೆ ಕಡೆ ವರ್ಗಾವಣೆ ಆಗಿ ಬಿಟ್ಟರೆ, ವಿದ್ಯಾರ್ಥಿಗಳು ಅವರನ್ನ ಬೀಳ್ಕೊಡುವ ಬಗೆ ಹೇಗಿರುತ್ತೆ ಗೊತ್ತಾ..? ಅಂತಹದ್ದೆ ಒಂದು ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ.
ವಿದ್ಯಾರ್ಥಿಗಳು ತಮ್ಮ ಅಚ್ಚುಮೆಚ್ಚಿನ ಗುರುವನ್ನ ಹೇಗೆ ಸುತ್ತುವರೆದಿದ್ದಾರೆ ನೋಡಿ. ಕೆಲವರು ಕಣ್ಣೀರು ಹಾಕ್ತಿದ್ದರೆ, ಇನ್ನೂ ಕೆಲವರು ಆ ಶಿಕ್ಷಕನನ್ನ ಅಲ್ಲಿಂದ ಹೋಗಲು ಬಿಡದೇ ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಈ ಒಂದು ದೃಶ್ಯ ಕಂಡು ಬಂದಿದ್ದು ಚಂದೌಲಿ ಜಿಲ್ಲೆಯಲ್ಲಿ. ವಿದ್ಯಾರ್ಥಿಗಳ ಈ ಅತಿಯಾದ ಪ್ರೀತಿಯ ಪರಿ ನೋಡಿ ಶಿಕ್ಷಕ ಶಿವೇಂದ್ರ ಸಿಂಗ್ ಬಾಘೇಲ್ ಮೂಕನಾಗಿ ಹೋಗಿದ್ದರು.
ತಮ್ಮ ಭಾವನೆಗಳನ್ನ ನಿಯಂತ್ರಿಸಲಾಗದೇ ಹೆಣಗಾಡುವುದು ಅವರ ಮುಖಭಾವದಿಂದಲೇ ಗೊತ್ತಾಗುತ್ತಿತ್ತು. ತಾನು ಮತ್ತೆ ಬರುತ್ತೇನೆ ಅಂತ ಸಮಾಧಾನ ಮಾಡುತ್ತಿದ್ದರೂ ಆ ಮಕ್ಕಳ ದುಃಖ ಕಡಿಮೆ ಆಗಿರಲಿಲ್ಲ. ಶಿವೇಂದ್ರ ಇಲ್ಲಿನ ಚಕಿಯಾ ಬ್ಲಾಕ್‌ನ ರತಿಗಢ ಕಾಂಪೋಸಿಟ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಅವರಿಗೆ ಬೇರೆ ಶಾಲೆಗೆ ವರ್ಗಾವಣೆ ಆಗಿದ್ದರಿಂದ ವಿದ್ಯಾರ್ಥಿಗಳು ಬೀಳ್ಕೊಡುವ ಪರಿ ಹೀಗಿತ್ತು.
ಶಿಕ್ಷಕ ಮತ್ತು ವಿದ್ಯಾರ್ಥಿಗಳ ಈ ಬಾಂಧವ್ಯವನ್ನ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ತಮ್ಮ ಶಿಕ್ಷಕರನ್ನ ನೆನಪಿಸಿಕೊಂಡಿದ್ದಾರೆ. ಓರ್ವ ಶ್ರೇಷ್ಠ ಗುರು ಇದ್ದರೆ, ವಿದ್ಯಾರ್ಥಿಗಳ ಜೀವನ ಉಜ್ವಲ ಜೀವನಕ್ಕೆ ಅಡಿಪಾಯ ಹಾಕುವುದು. ಓರ್ವ ಗುರುವಿಗೆ ವಿದ್ಯಾರ್ಥಿಗಳು ಕೊಡುವ ಅಪರೂಪದ ಕಾಣಿಕೆ ಇದು ಅಂತ ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಹಾಕಿದ್ದಾರೆ.