ಬೆಂಗಳೂರು: ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ, ಡಿಪ್ಲೊಮೋ ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನ. 17 ರಂದು ಕಾಲೇಜು ಪ್ರಾಂಭವಾಗುತ್ತಿದ್ದು, ಕಾಲೇಜಿಗೆ ಬರಲು ಇಚ್ಚಿಸುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಅವರು ಸೂಚಿಸಿದ್ದಾರೆ.
ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭಿಸುವುದರ ಕುರಿತು ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯದ ಹಿನ್ನಲೆಯಲ್ಲಿ ಪ್ರತಿಯೊಂದು ಕಾಲೇಜುಗಳಲ್ಲಿಯೂ ಪೂರಕ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಕಾಲೇಜಿನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪಾಠ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯದ ವಿಷಯದಲ್ಲಿ ಯಾವುದಾದರೂ ಗೊಂದಲಗಳಿದ್ದರೆ ಅಥವಾ ಅರ್ಥವಾಗದಿದ್ದರೆ ಕಾಲೇಜಿನ ವೇಳಾ ಪಟ್ಟಿ ಪ್ರಕಾರ, ಕಾಲೇಜಿಗೆ ಬಂದು ಸಂಬಂಧಪಟ್ಟ ಶಿಕ್ಷಕರಿಂದ ಸ್ಪಷ್ಟಪಡಿಸಿಕೊಳ್ಳಲು ಅವಕಾಶವಿದೆ ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಪದವಿ ಕಾಲೇಜುಗಳನ್ನು ಪ್ರತಿ ದಿನ ಸ್ಯಾನಿಟೈಸೇಷನ್ ಮಾಡುವಂತೆ ಹಾಗೂ ಪ್ರತಿ ಕಾಲೇಜಿನಲ್ಲಿಯೂ ಥರ್ಮಲ್ ಸ್ಕ್ಯಾನರ್ ಬಳಸುವಂತೆ ತಿಳಿಸಲಾಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸಲು ಸೂಚನೆ ನೀಡುವಂತೆ ತಿಳಿಸಿದ್ದು, ಕೋವಿಡ್ ಹರಡುತ್ತಿರುವ ಹಿನ್ನಲೆಯಲ್ಲಿ ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ಶೇ.50 ಕ್ಕಿಂತ ಹೆಚ್ಚಾಗಿದ್ದರೆ ಬೋಧನಾ ಸಮಯ ವಿಂಗಡಿಸಿ ಪಾಠ ಮಾಡುವಂತೆ ಸೂಚಿಸಲಾಗಿದೆ.
ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಪ್ರತಿಯೊಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ಹಾಗೂ ವಿಶ್ವ ವಿದ್ಯಾನಿಲಯಗಳಲ್ಲಿ ಒಂದೊಂದು ಟಾಸ್ಕ್ ಫೋರ್ಸ್ ಸಮಿತಿ ರಚಿಸುವಂತೆ ಸೂಚಿಸಿದ್ದು, ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬರುವುದರಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶಿಸಲಾಗಿದೆ.
ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲವಾಗುವಂತೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದ ನಂತರ ಪರೀಕ್ಷಾ ವರದಿಯನ್ನು ಶೀಘ್ರವಾಗಿ ನೀಡಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ರವಿಕುಮಾರ್ ಸುರಪುರ್ ಅವರು ಮಾತನಾಡಿ, ಶಿಕ್ಷಣ ಇಲಾಖೆ ವಿದ್ಯಾರ್ಥಿ ನಿಲಯ, ವಿಶ್ವ ವಿದ್ಯಾನಿಲಯಗಳ ವಿದ್ಯಾರ್ಥಿ ನಿಲಯ ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿನಿಲಯಗಳಲ್ಲಿ ಉಳಿಯುವ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಪ್ರಾರಂಭಕ್ಕೂ ಮುಂಚೆಯೇ ಸ್ಯಾನಿಟೈಸೇಷನ್ ಹಾಗೂ ಸ್ವಚ್ಚತೆಗೆ ಕ್ರಮವಹಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ತೃತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ಉಳಿಸಲು ಇಚ್ಚಿಸಿದರೆ ಪೋಷಕರ ಒಪ್ಪಿಗೆಯ ಮೇರೆಗೆ ಪ್ರವೇಶಾತಿ ನೀಡುವಂತೆ ಹಾಗೂ ವಿದ್ಯಾರ್ಥಿ ನಿಲಯಗಳ ನಿಯಮಗಳನ್ನು ಉಲ್ಲಂಘಿಸಿದವರ ಪ್ರವೇಶಾತಿ ರದ್ದು ಮಾಡುವಂತೆ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿಯ ವಿದ್ಯಾರ್ಥಿ ನಿಲಯಗಳನ್ನು ಕೋವಿಡ್ ಕೇರ್ ಕೇಂದ್ರವಾಗಿ ಅಥವಾ ಇನ್ನಿತರ ಸರ್ಕಾರೇತರ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಉಳಿಯಲು ವ್ಯವಸ್ಥೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಪ್ರತಿಯೊಂದು ವಿದ್ಯಾರ್ಥಿ ನಿಲಯಗಳಲ್ಲಿಯೂ ಆರೋಗ್ಯ ಹದಗೆಟ್ಟ ಮಕ್ಕಳ ಪೋಷಣೆಗಾಗಿ ಪ್ರತ್ಯೇಕ ಐಸೋಲೇಷನ್ ಕೊಠಡಿ ವ್ಯವಸ್ಥೆ ಮಾಡುವಂತೆ ಹಾಗೂ ಪಾಸಿಟೀವ್ ಪ್ರಕರಣಗಳು ಪತ್ತೆಯಾದರೆ ವಿದ್ಯಾರ್ಥಿ ನಿಲಯಗಳನ್ನು ಮುಚ್ಚದೆ, ಅಂತಹವರನ್ನು ಚಿಕಿತ್ಸೆಗೆ ಒಳಪಡಿಸಿ ಪ್ರಾಥಮಿಕ ಸಂಪರ್ಕಿತರನ್ನು ಐಸೋಲೇಷನ್ ನಲ್ಲಿಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿ ನಿಲಯಗಳಿಗೆ ಬರುವ ವಿದ್ಯಾರ್ಥಿಗಳಿಗೆ ಮಧುಮೇಹ, ಮೂತ್ರಪಿಂಡ ಕಾಯಿಲೆ, ಕ್ಯಾನ್ಸರ್ ಹಾಗೂ ಮತ್ತಿತರ ಗಂಭೀರ ಕಾಯಿಲೆಗಳಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವಂತಿಲ್ಲ ಎಂದು ತಿಳಿಸಲಾಗಿದೆ.