
ಕಲಬುರಗಿ: ಪದವಿ ಹಾಗೂ ಇತರ ವರ್ಗದ ವಿದ್ಯಾರ್ಥಿಗಳಿಗೆ 2020-21ನೇ ಶೈಕ್ಷಣಿಕ ವರ್ಷದ ಚಟುವಟಿಕೆ ಪ್ರಾರಂಭವಾಗಿವೆ.
ಎಲ್ಲಾ ವರ್ಗದ ಶಾಲಾ/ಕಾಲೇಜು ವಿದ್ಯಾರ್ಥಿಗಳು ಕಳೆದ ವರ್ಷದ ಹಳೆಯ (2019-20) ಬಸ್ ಪಾಸ್ ಮತ್ತು ಪ್ರಸ್ತುತ ಸಾಲಿನಲ್ಲಿ ಶಾಲಾ/ಕಾಲೇಜುಗಳಿಗೆ ಪಾವತಿಸಿರುವ ರಶೀದಿ ತೋರಿಸಿ ಸಂಸ್ಥೆಯ ಬಸ್ ಗಳಲ್ಲಿ ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ/ಕಾಲೇಜುಗಳಿಗೆ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‍ಗಳಲ್ಲಿ 2021ರ ಮಾರ್ಚ್ 31 ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್ ಎಂ. ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು 2020-21ನೇ ಸಾಲಿನ ಬಸ್ ಪಾಸ್‍ಗಳನ್ನು ಸೇವಾ ಸಿಂಧುವಿನ ಮೂಲಕ ಅರ್ಜಿ ಪಡೆದು ಬಸ್ ಪಾಸ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಕೂಡಲೇ ಬಸ್ ಪಾಸ್‍ಗಳನ್ನು ಪಡೆದುಕೊಳ್ಳಬೇಕು. ಆದರೆ, ಈಗ ವಿದ್ಯಾರ್ಥಿಗಳಿಗೆ ಬಸ್ ಪಾಸುಗಳನ್ನು ಪಡೆಯಲು ಸಾಕಷ್ಟು ಕಾಲಾವಕಾಶ ನೀಡಲು ಸಲುವಾಗಿ 2021ರ ಮಾರ್ಚ್ 31ರವರೆಗೆ ಸಂಸ್ಥೆಯ ಬಸ್‍ಗಳನ್ನು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.