ಬೆಂಗಳೂರು: ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ಶುಲ್ಕ ಮರುಪಾವತಿಯ ಮೊತ್ತವನ್ನು 10 ದಿನಗಳಲ್ಲಿ ಖಾತೆಗೆ ವರ್ಗಾವಣೆ ಮಾಡಲಾಗುವುದು.
ಕಳೆದ ವರ್ಷದ ಬಾಕಿ ಪಾವತಿಗೆ ಬಜೆಟ್ ನಲ್ಲಿ ಸರ್ಕಾರ 400 ಕೋಟಿ ರೂ. ಒದಗಿಸಿದೆ. ಅದರಲ್ಲಿ 360 ಕೋಟಿ ರೂ.ಗಳನ್ನು ಜಿಲ್ಲಾವಾರು ಹಂಚಿಕೆ ಮಾಡಿ ಆರ್ಥಿಕ ಇಲಾಖೆ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳ ಖಾತೆಗೆ ಇತ್ತೀಚೆಗೆ ಗರಿಷ್ಠ 3000 ರೂ. ವರೆಗೆ ಹಣ ವರ್ಗಾವಣೆಯಾಗಿದೆ. ಸ್ಕಾಲರ್ ಶಿಪ್ ಹಾಗೂ ಶುಲ್ಕ ಮರುಪಾವತಿ ಇದೇ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿದ್ದು, ಸರ್ಕಾರ ಹಣ ಕಡಿತ ಮಾಡಿದೆ ಎಂಬ ಅಸಮಾಧಾನ ವ್ಯಕ್ತವಾಗಿತ್ತು.
ಇತ್ತೀಚಿಗೆ ವರ್ಗಾವಣೆಯಾಗಿರುವ ಮೊತ್ತ ಪೋಸ್ಟ್ ಮೆಟ್ರಿಕ್ಸ್ ಸ್ಕಾಲರ್ ಶಿಪ್ ಆಗಿದೆ. 10 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಯಾಗಲಿದೆ. ಕಳೆದ ವರ್ಷ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಸಮಸ್ಯೆಯಾಗಿತ್ತು. ಈಗ ಸಮಸ್ಯೆ ನಿವಾರಣೆಯಾಗಿದ್ದು, ವಿದ್ಯಾರ್ಥಿಗಳಿಗೆ ನೀಡುವ ಮೊತ್ತದಲ್ಲಿ ಯಾವುದೇ ಕಡಿತ ಮಾಡುತ್ತಿಲ್ಲ ಎಂದು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, 10 ದಿನದಲ್ಲಿ ವಿದ್ಯಾರ್ಥಿಗಳ ಖಾತೆಗೆ ಶುಲ್ಕ ಮರುಪಾವತಿ ಹಣ ಜಮಾ ಮಾಡುವುದಾಗಿ ಹೇಳಿದ್ದಾರೆ.