ಯಾರು ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವ ನೀಡುವನು…..ಇಂದಿನ ಮಕ್ಕಳಿಗೆ ಈ ಬಗ್ಗೆ ತಿಳಿಸಿಕೊಡಬೇಕಾದ ಅಗತ್ಯವಿದೆ….. ಇಲ್ಲೊಂದು ಶಾಲೆಯಲ್ಲಿ ಇಂತದ್ದೊಂದು ಪ್ರಯತ್ನ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ರೈತ ದೇಶದ ಬೆನ್ನೆಲುಬು. ಪ್ರತಿಯೊಬ್ಬರಿಗೂ ಅನ್ನ ನೀಡುವ ಅನ್ನದಾತನ ಬದುಕು-ಬವಣೆ ಹೊಲ-ಗದ್ದೆಗಳಲ್ಲಿ ರೈತರು ಮಾಡುವ ಉಳುಮೆ, ಕೃಷಿ ಚಟುವಟಿಕೆಗಳ ಬಗ್ಗೆ ಇಂದಿನ ಮಕ್ಕಳಿಗೆ ನಿಜಕ್ಕೂ ಅರಿವು ಮೂಡಿಸಬೇಕಾದ ಅಗತ್ಯವಿದೆ. ಶಾಲಾ ದಿನಗಳಲ್ಲಿಯೇ ಮಕ್ಕಳನ್ನು ಒಮ್ಮೆಯಾದರೂ ಹೊಲ-ಗದ್ದೆಗಳಿಗೆ ಕರೆದೊಯ್ದು ಉಳುಮೆ ಮಾಡುವ ರೀತಿ, ಭತ್ತದ ನಾಟಿ ಕೆಲಸದ ಬಗ್ಗೆ ಮಾಹಿತಿ ನೀಡಲೇಬೇಕು.
ಇಂದಿನ ಮಕ್ಕಳೇ ನಾಳಿನ ನಾಡಿನ ಪ್ರಜೆಗಳು. ಇಂದಿನ ಮಕ್ಕಳು ನಾಳೆ ಡಾಕ್ಟರ್, ಎಂಜಿನಿಯರ್, ವಿಜ್ಞಾನಿ ಹೀಗೆ ಯಾವುದೇ ಕ್ಷೇತ್ರವನ್ನು ಆಯ್ದುಕೊಳ್ಳಬಹುದು, ಏನುಬೇಕಾದರೂ ಸಾಧನೆ ಮಾಡಬಹುದು. ಆದರೆ ಪ್ರತಿ ದಿನ ನಮಗೆ ಅನ್ನವನ್ನು ನೀಡುವ ಅನ್ನದಾತ ರೈತನ ಬಗ್ಗೆ, ಹೊಲದಲ್ಲಿ ಆತ ಮಾಡುವ ದುಡಿಮೆ, ಪಡುವ ಕಷ್ಟದ ಬಗ್ಗೆಯೂ ಅರಿವು ಮೂಡಿಸುವ ಅಗತ್ಯವಿದೆ. ಕರಾವಳಿ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕರು ಇಂತದ್ದೊಂದು ಅರಿವನ್ನು ಮಕ್ಕಳಿಗೆ ಮೂಡಿಸಿದ್ದಾರೆ. ಒಂದುದಿನ ಮಕ್ಕಳಿಗೆ ರೈತರು, ರೈತ ಮಹಿಳೆಯರಂತೆ ಸಿಂಗರಿಸಿ, ಎತ್ತಿನ ಬಂಡಿಯ ಜೊತೆ ಹೊಲ-ಗದ್ದೆಗಳಿಗೆ ಕರೆದೊಯ್ದು, ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡುವ ರೀತಿ, ಭತ್ತದ ಸಸಿ, ನಾಟಿ ಕೆಲಸಗಳ ಬಗ್ಗೆ ಪೈರು, ಭತ್ತ-ಅಕ್ಕಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಗದ್ದೆಗಳಲ್ಲಿ ಇಳಿದು ಮಕ್ಕಳು-ಶಿಕ್ಷಕರೇ ನಾಟಿ ಹಾಕುವ ಮೂಲಕ ಕೃಷಿಯ ಮಹತ್ವ ಸಾರಿದ್ದಾರೆ.
ಶಿಕ್ಷಕರೊಂದಿಗೆ ಮಕ್ಕಳು ಕೂಡ ಕೆಸರು ಗದ್ದೆಯಲ್ಲಿ ನಾಟಿ ಹಾಕುವ ಮೂಲಕ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ರಾಷ್ಟ್ರಕವಿ ಕುವೆಂಪು ಬರೆದ ನೇಗಿಲ ಹಿಡಿದಾ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ…..ಯಾರು ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು…..ಸಾಲುಗಳು ನೆನಪಾಗದೇ ಇರಲಾರದು.