ಗ್ವಾಲಿಯರ್(ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಆತನ ಬ್ಯಾಚ್ಮೇಟ್ಗಳು ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಹುಡುಗರು PUBG ಆಡುವುದಕ್ಕೆ ಸಂತ್ರಸ್ತ ಆಕ್ಷೇಪಿಸಿದ್ದ. ಗಲಾಟೆಯಿಂದ ಅಧ್ಯಯನಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದ. ಇದರಿಂದ ಕೋಪಗೊಂಡ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ.
ಕೂಡಲೇ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಗ್ವಾಲಿಯರ್ನ ಝಾನ್ಸಿ ರಸ್ತೆಯಲ್ಲಿರುವ ಪಿಎಂಎಸ್ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್ನ ಅರ್ಧ ಡಜನ್ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿಯ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಫೋನ್ಗಳಲ್ಲಿ PUBG ಆಡುತ್ತಿದ್ದಾಗ ಗಲಾಟೆಯಾಗಿ ಈ ಘಟನೆ ನಡೆದಿದೆ. ಗಿಜೋರಾದ ನಿವಾಸಿ ಆಕಾಶ್ ರಜೋರಿಯಾ ಗಾಯಗೊಂಡ ವಿದ್ಯಾರ್ಥಿ. ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಆಕಾಶ್ ಹಾಸ್ಟೆಲ್ ಹಿಂಭಾಗಕ್ಕೆ ಓಡಿದ್ದಾನೆ. ಶ್ರೀರಾಮ ಕಾಲೋನಿಯ ಕಡೆಗೆ ಹೋಗುತ್ತಿದ್ದ ವೇಳೆ ಸಹಪಾಠಿಗಳು ಅವನನ್ನು ಹಿಡಿದು ಚಾಕುವಿನಿಂದ ಇರಿದಿದ್ದಾರೆ.
ಘಟನೆ ಸಂಬಂಧ ಝಾನ್ಸಿ ರಸ್ತೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಗಾಯಗೊಂಡಿರುವ ಆಕಾಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಆರೋಪಿ ವಿದ್ಯಾರ್ಥಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.