ಆಟ, ತುಂಟಾಟ, ಕೀಟಲೆ ಇವೆಲ್ಲವೂ ಇಲ್ಲದೇ ಹೋದರೆ ಬಾಲ್ಯ, ಬಾಲ್ಯವೇ ಅಲ್ಲ ಅಂತ ಅನಿಸಿಬಿಡುತ್ತೆ. ಅದರಲ್ಲೂ ಶಾಲಾ ದಿನಗಳಲ್ಲಿ ಗೆಳೆಯರ ಜೊತೆ ಮಾಡುವ ತಮಾಷೆಗಳಂತೂ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವಂತಿರುತ್ತೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಡಿಯೋ ನೋಡ್ತಿದ್ರೆ ನಿಮಗೂ ನಿಮ್ಮ ಶಾಲಾ ದಿನ ನೆನಪಾಗದೇ ಇರೋಲ್ಲ.
ಈ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ಶಾಲೆಯ ವೇದಿಕೆ ಮೇಲೆ ಡಾನ್ಸ್ ಮಾಡುತ್ತಿರುವುದನ್ನ ಗಮನಿಸಬಹುದು. ಇಲ್ಲಿ ಹೀಗೆ ಡಾನ್ಸ್ ಮಾಡುತ್ತಿರುವಾಗಲೇ, ಈತನ ಗೆಳೆಯ ವೇದಿಕೆ ಮೇಲೆ ಬಂದು ಕೈಯಲ್ಲಿ ನೋಟು ಹಿಡಿದುಕೊಂಡು ಆತನ ಸುತ್ತ ನಿವಾಳಿಸಿ ಬಿಸಾಕುತ್ತಾನೆ. ಒಂದೆರಡು ಕ್ಷಣ ಆ ಶಾಲಾ ಕಾರ್ಯಕ್ರಮದಲ್ಲಿ ನೆರೆದಿದ್ದವರೆಲ್ಲರೂ, ಅಲ್ಲಿ ಏನಾಗ್ತಿದೆ ಅನ್ನೋದು ಗೊತ್ತಾಗದೇ ಶಾಕ್ ಆಗುತ್ತಾರೆ. ಅಲ್ಲೇ ಇದ್ದ ಶಿಕ್ಷಕ, ಆ ವಿದ್ಯಾರ್ಥಿಗೆ ಸರಿಯಾಗಿ ಒದೆ ಕೊಟ್ಟು ಆತನನ್ನ ಕಾರ್ಯಕ್ರಮದಿಂದ ಹೊರ ದಬ್ಬುತ್ತಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋವನ್ನು ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಈ ರೀತಿ ವರ್ತಿಸಬಾರದಿತ್ತು ಎಂದು ಹಲವು ನೆಟ್ಟಿಗರು ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ವಿದ್ಯಾರ್ಥಿಗೆ ಶಿಸ್ತು ಇಲ್ಲದ ಕಾರಣ ಶಿಕ್ಷಕ ಮಾಡಿದ್ದು ಸರಿ ಎಂದು ಕೆಲವರು ಕಾಮೆಂಟ್ ಬಾಕ್ಸ್‌ನಲ್ಲಿ ಬರೆದಿದ್ದಾರೆ.