ಉತ್ತರ ಪ್ರದೇಶದ ಹಾಥರಸ್ ನಲ್ಲಿ ಶಾಲೆಯ ಏಳಿಗೆಗಾಗಿ ಶಿಕ್ಷಣ ಸಂಸ್ಥೆಯ ಮಾಲೀಕ ಮತ್ತಿತರರು ಸೇರಿಕೊಂಡು 11 ವರ್ಷದ ಬಾಲಕನನ್ನು ಬಲಿ ಕೊಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮಾಲೀಕ, ನಿರ್ದೇಶಕ, ಪ್ರಾಂಶುಪಾಲ ಮತ್ತು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.
ಕೃತಾರ್ಥ್ ಮೃತಪಟ್ಟ ವಿದ್ಯಾರ್ಥಿ. ಎರಡನೇ ತರಗತಿ ವಿದ್ಯಾರ್ಥಿಯಾಗಿರುವ ಕೃತಾರ್ಥ್ ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ವಾಮಾಚಾರದಲ್ಲಿ ನಂಬಿಕೆ ಇಟ್ಟಿದ್ದ ಡಿಎಲ್ ಪಬ್ಲಿಕ್ ವಸತಿ ಶಾಲೆಯ ಮಾಲೀಕ ಜಶೋಧನ್ ಸಿಂಗ್ ಶಾಲೆಯ ಮತ್ತು ಕುಟುಂಬದ ಬೆಳವಣಿಗೆಗಾಗಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಎರಡನೇ ತರಗತಿಯ ಬಾಲಕ ಕೃತಾರ್ಥ್ ನನ್ನು ಬಲಿ ಕೊಟ್ಟಿದ್ದಾನೆ.
ಸೆಪ್ಟೆಂಬರ್ 22 ರಂದು ಗೌಪ್ಯ ಸ್ಥಳದಲ್ಲಿ ಆರೋಪಿಗಳು ನರಬಲಿ ಪೂಜೆ ನಡೆಸಿದ್ದಾರೆ. ಶಾಲೆಯಿಂದ ಅಪಹರಿಸಿ ಕರೆತರಲಾಗಿದ್ದ ವಿದ್ಯಾರ್ಥಿ ಕೃತಾರ್ಥ್ ನನ್ನು ಸೆಪ್ಟಂಬರ್ 23ರಂದು ಬಲಿ ನೀಡಿದ್ದಾರೆ. ಜಶೋಧನ್ ಸಿಂಗ್ ಸೂಚನೆಯಂತೆ ಅವರ ಮಗ ಕತ್ತು ಹಿಸುಕಿ ಬಾಲಕನನ್ನು ಕೊಂದಿದ್ದಾನೆ. ಈ ಕೃತ್ಯಕ್ಕೆ ಪ್ರಾಂಶುಪಾಲ ಲಕ್ಷ್ಮಣ ಸಿಂಗ್, ಶಿಕ್ಷಕರಾದ ರಾಮಪ್ರಕಾಶ್ ಸೋಲಂಕಿ, ವೀರ ಪಾಲಸಿಂಗ್, ನಿರ್ದೇಶಕ ದಿನೇಶ್ ಬಘೇಲ್ ಸಹಕಾರ ನೀಡಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಶಾಲೆಯಿಂದ ಬಾಲಕನನ್ನು ಅಪಹರಿಸಿ ಬಲಿಕೊಡಲು ನಿರ್ಧರಿಸಿದ್ದ ಸ್ಥಳದಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಕೃತಾರ್ಥ್ ಆರೋಗ್ಯ ಸರಿ ಇಲ್ಲದ ಕಾರಣ ಬಘೇಳ್ ಅವರ ಕಾರ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಪೋಷಕರಿಗೆ ಆರೋಪಿಗಳು ಮಾಹಿತಿ ನೀಡಿದ್ದಾರೆ. ಬಾಲಕನ ಕುಟುಂಬದವರು ಬಂದು ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡಿಲ್ಲ. ಕಾರ್ ಅಡ್ಡಗಟ್ಟಿದ ಸಂಬಂಧಿಕರು ಬಾಲಕ ಮೃತಪಟ್ಟ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆರೋಪಿಗಳ ಕೃತ್ಯ ಬಯಲಾಗಿದೆ.
ಪ್ರಕರಣ ಬೆಳಕಿಗೆ ಬಂದ ನಂತರ ಹಾಥರಸ್ ಬಿಇಒ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಕ್ರಮವಾಗಿ ನಡೆಯುತ್ತಿದ್ದ ಶಾಲೆಯನ್ನು ಮುಚ್ಚುವಂತೆ ಸೂಚನೆ ನೀಡಿದ್ದಾರೆ. ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.