ಬೆಂಗಳೂರು: ಸ್ನೇಹಿತನ ಜೊತೆಗಿದ್ದ ಫೋಟೋ ತೋರಿಸಿ ಪಿಯುಸಿ ವಿದ್ಯಾರ್ಥಿನಿಗೆ ಬ್ಲಾಕ್ ಮೇಲ್ ಮಾಡಿ 75 ಗ್ರಾಂ ಚಿನ್ನಾಭರಣ ಹಣ ಸುಲಿಗೆ ಮಾಡಲಾಗಿದ್ದು, ಆರೋಪಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯಪುರದ ನಾಯ್ಡು ಬಡಾವಣೆಯ ತೇಜಸ್(19) ಬಂಧಿತ ಆರೋಪಿ. ಈತ ಸುಲಿಗೆ ಮಾಡಿದ್ದ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಸಂತ್ರಸ್ತೆ ಚಿಕ್ಕಲ್ಲಸಂದ್ರದಲ್ಲಿ ಪೋಷಕರೊಂದಿಗೆ ವಾಸವಾಗಿದ್ದು, ಡೆಲಿವರಿ ಬಾಯ್ ಆಗಿದ್ದ ತೇಜಸ್ ಅದೇ ಏರಿಯಾದವನಾಗಿದ್ದ ಕಾರಣಕ್ಕೆ ಪರಿಚಯವಿದ್ದ. ಕಾಲೇಜಿಗೆ ಹೋಗುತ್ತಿದ್ದ ಯುವತಿ ತನ್ನ ಸಹಪಾಠಿ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು. ಅದನ್ನು ತೇಜಸ್ ಕದ್ದು ಬ್ಲಾಕ್ ಮೇಲ್ ಮಾಡಿದ್ದಾನೆ. ಪೋಷಕರಿಗೆ ತೋರಿಸಿ ಪ್ರೀತಿ ವಿಚಾರ ತಿಳಿಸುವುದಾಗಿ ಬೆದರಿಸಿದ್ದಾನೆ.
ಮನೆಯವರಿಗೆ ಗೊತ್ತಾದರೆ ಕಾಲೇಜು ಬಿಡಿಸುತ್ತಾರೆ ಎಂದು ಭಯಗೊಂಡ ವಿದ್ಯಾರ್ಥಿನಿ ತೇಜಸ್ ಕೇಳಿದಂತೆ 1.25 ಲಕ್ಷ ರೂ., 75 ಗ್ರಾಂ ಚಿನ್ನಾಭರಣ ಕೊಟ್ಟಿದ್ದಾಳೆ. ವಿದ್ಯಾರ್ಥಿನಿಯ ತಾಯಿ ಮನೆಯಲ್ಲಿದ ಚಿನ್ನ ಕಾಣಿಸದಿದ್ದಾಗ ಪ್ರಶ್ನಿಸಿದ್ದಾಳೆ. ಈ ವೇಳೆ ತೇಜಸ್ ಬ್ಲಾಕ್ ಮೇಲ್ ಮಾಡಿದ ಬಗ್ಗೆ ವಿದ್ಯಾರ್ಥಿನಿ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಒತ್ತೆ ಇಟ್ಟಿದ್ದ ಚಿನ್ನ ವಶಕ್ಕೆ ಪಡೆದಿದ್ದಾರೆ.