ಉತ್ತರ ಪ್ರದೇಶದ ನೋಯ್ಡಾದ ವಿವಿ ಕ್ಯಾಂಪಸ್‌ನಲ್ಲಿ ಮೂರನೇ ವರ್ಷದ ಸಮಾಜಶಾಸ್ತ್ರ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆಯೊಂದಿಗೆ ಜಗಳವಾಡಿದ ನಂತರ ಆಕೆಗೆ ಗುಂಡಿಟ್ಟು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೋಯ್ಡಾದ ಶಿವ ನಾಡರ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಮೂರನೇ ವರ್ಷದ ಸಮಾಜಶಾಸ್ತ್ರ ವಿದ್ಯಾರ್ಥಿ ಅನುಜ್ ತನ್ನ ಸ್ನೇಹಿತೆಯೊಂದಿಗೆ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿರುವ ಡೈನಿಂಗ್ ಹಾಲ್‌ನ ಹೊರಗೆ ಜಗಳವಾಡಿದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂದೂಕು ಹೊರತೆಗೆದು ಶೂಟ್ ಮಾಡುವ ಮೊದಲು ವಿದ್ಯಾರ್ಥಿ ತನ್ನ ಸ್ನೇಹಿತೆಯನ್ನು ತಬ್ಬಿಕೊಂಡಿದ್ದ. ವಿದ್ಯಾರ್ಥಿನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಸ್ನೇಹಿತೆಗೆ ಗುಂಡು ಹಾರಿಸಿದ ನಂತರ ಅನುಜ್ ವಿದ್ಯಾರ್ಥಿಗಳ ಹಾಸ್ಟೆಲ್‌ನ ಕೋಣೆಗೆ ಹೋಗಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನುಜ್ ಮತ್ತು ವಿದ್ಯಾರ್ಥಿನಿ ಉತ್ತಮ ಸ್ನೇಹಿತರಾಗಿದ್ದರು ಮತ್ತು ಕೆಲವು ಸಮಯಗಳಿಂದ ಜಗಳವಾಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ತನಿಖೆ ಆರಂಭಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.