ಮಂಗಳೂರು: ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಹಠಾತ್ ಎದೆ ನೋವು ಕಾಣಿಸಿಕೊಂಡಿದ್ದು, ಸಮಯಪ್ರಜ್ಞೆ ತೋರಿದ ಬಸ್ ಚಾಲಕ ಮತ್ತು ನಿರ್ವಾಹಕರು ಕೂಡಲೇ ಬಸ್ ಅನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದು ಜೀವ ಉಳಿಸಿದ್ದಾರೆ.
ಮಂಗಳೂರಿನ ಕುಂಜತ್ ಬೈಲ್ ನಿಂದ ಮಂಗಳಾದೇವಿಗೆ ತೆರಳುವ ಕೃಷ್ಣಪ್ರಸಾದ್ ಬಸ್ ನಲ್ಲಿ ಮಧ್ಯಾಹ್ನ 3:30ಕ್ಕೆ ಕೋಳೂರಿನಲ್ಲಿ ಆರು ನರ್ಸಿಂಗ್ ವಿದ್ಯಾರ್ಥಿಗಳು ಹತ್ತಿದ್ದಾರೆ. ಬಸ್ ಉರ್ವ ಸ್ಟೋರ್ ತಲುಪಿದಾಗ ವಿದ್ಯಾರ್ಥಿನಿಯೊಬ್ಬರಿಗೆ ಎದೆ ನೋವು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಜೊತೆಗಿದ್ದ ಸ್ನೇಹಿತರು ಹಾಗೂ ಮಹಿಳೆಯೊಬ್ಬರು ಆರೈಕೆ ಮಾಡಿದ್ದಾರೆ. ಬಸ್ ಲೇಡಿಹಿಲ್ ತಲುಪುವ ವೇಳೆಗೆ ವಿದ್ಯಾರ್ಥಿನಿ ಅರೆಪ್ರಜ್ಞಾವಸ್ಥೆಗೆ ತಲುಪಿದ್ದಾಳೆ. ತಕ್ಷಣ ಬಸ್ ಚಾಲಕ ಗಜೇಂದ್ರ ಕುಂದರ್ ಮತ್ತು ನಿರ್ವಾಹಕ ಮಹೇಶ್ ಪೂಜಾರಿ ಹಾಗೂ ಸುರೇಶ ಅವರು ಬಸ್ ಅನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ತಂದು ಸಕಾಲಕ್ಕೆ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಂಬುಲೆನ್ಸ್ ರೀತಿಯಲ್ಲಿ ಹಾರ್ನ್ ಬಾರಿಸುತ್ತ ವಾಹನ ದಟ್ಟಣೆಯ ನಡುವೆಯೂ ಆರು ಕಿಲೋಮೀಟರ್ ದೂರವನ್ನು ಕೇವಲ ಆರು ನಿಮಿಷಗಳಲ್ಲಿ ಕ್ರಮಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಯ ಬಳಿಕ ವಿದ್ಯಾರ್ಥಿನಿ ಚೇತರಿಸಿಕೊಂಡಿದ್ದು, ಸಮಯ ಪ್ರಜ್ಞೆ ಮತ್ತು ಮಾನವೀಯತೆ ತೋರಿದ ಬಸ್ ಸಿಬ್ಬಂದಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.