ರಾಮನಗರ: ಮೊರಾರ್ಜಿ ವಸತಿ ಶಾಲೆಯ ನೀರಿನ ಟ್ಯಾಂಕ್ ಗೋಡೆ ಕುಸಿದು ಬಿದ್ದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ದಾರುಣ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
12 ವರ್ಷದ ವಿದ್ಯಾರ್ಥಿ ಕೌಶಿಕ್ ಮೃತ ದುರ್ದೈವಿ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಹೆಚ್.ಗೊಲ್ಲಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ದುರಂತ ಸಂಭವಿಸಿದೆ. ವಿದ್ಯಾರ್ಥಿ ಬೆಳಿಗ್ಗೆ ಸ್ನಾನಕ್ಕೆ ಹೋಗಿದ್ದಾಗ ಗೋಡೆ ಕುಸಿದು ಬಿದ್ದಿದ್ದು, ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ನೀರು ಸಂಗ್ರಹಕ್ಕೆಂದು ವಸತಿ ಶಾಲೆಯ ಹಾಸ್ಟೇಲ್ ಹೊರಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ನೀರಿನ ಪ್ರಮಾಣ ತಡೆಯಲಾಗದೇ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಸ್ನಾನಕ್ಕೆಂದು ಹೋಗಿದ್ದ ವಿದ್ಯಾರ್ಥಿ ಮೆಲೆಯೇ ಗೋಡೆ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೋರ್ವ ವಿದ್ಯಾರ್ಥಿ ಕಾಲಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.