
ಮೊಬೈಲ್ ಫೋನ್ ಕೈಯಲ್ಲಿದ್ರೆ ಸಾಕು ಇಂದಿನ ಯುವಕರಿಗೆ ಅಪಾಯ ಕಣ್ಣೆದುರು ಬಂದರೂ ಪರಿಜ್ಞಾನವೇ ಇರಲ್ಲ. ಅಷ್ಟರಮಟ್ಟಿಗೆ ಮೊಬೈಲ್ ನಲ್ಲಿ ಮುಳುಗಿಬಿಡುತ್ತಾರೆ. ಹೀಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ವಿದ್ಯಾರ್ಥಿಯೊಬ್ಬ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಯೊಬ್ಬ ರಾತ್ರಿ ವೇಳೆ ಮೊಬೈಲ್ ನಲ್ಲಿ ಮಾತನಾಡುತ್ತಾ ಆಕಸ್ಮಿಕವಾಗಿ 120 ಅಡಿ ಆಳದ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಈ ಘಟನೆ ನಡೆದಿದೆ.
ರಾಹುಲ್ ಕುಮಾರ್ ಮೃತ ವಿದ್ಯಾರ್ಥಿ. ಜಮೀನು ಬಳಿಯ ಬಾವಿ ಪೊದೆಗಳಿಂದ ಆವೃತವಾಗಿತ್ತು. ಇದನ್ನು ಗಮನಿಸದ ವಿದ್ಯಾರ್ಥಿ ಮೊಬೈಲ್ ನಲ್ಲಿ ಮಾತನಾಡುತ್ತಾ ಬಾವಿಯಲ್ಲಿ ಕಾಲಿಟ್ಟಿದ್ದಾನೆ. ಸತತ ಕಾರ್ಯಾಚರಣೆ ಬಳಿಕ ವಿದ್ಯಾರ್ಥಿಯನ್ನು ಮೇಲಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕಿಸಲು ಸಾಧ್ಯವಗಿಲ್ಲ.
ರಾಹುಲ್ ಹತ್ರಾಸ್ ನ ನಗ್ಲಾ ಪ್ರದೇಶದ ಜಮೀನಿನಲ್ಲಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಆಲೂಗಡ್ಡೆ ತುಂಬಿಸಲಾಗಿದ್ದನ್ನು ನೋಡಿಕೊಳ್ಳಲು ಹೋಗಿದ್ದ. ಈ ವೇಳೆ ಟ್ರ್ಯಾಕ್ಟರ್ ಕೆಟ್ಟಿದ್ದರಿಂದ ಮನೆಗೆ ಕರೆ ಮಾಡಲೆಂದು ಮೊಬೈಲ್ ನಲ್ಲಿ ಮಾತನಾಡುತ್ತಾ ಬಂದಿದ್ದಾನೆ. ಈ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ರಾಹುಲ್ ವಿದ್ಯಾಭ್ಯಾಸದ ಜೊತೆ ಮನೆಯಲ್ಲಿ ಕೃಷಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದ.