ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವನಶ್ರೀ ಖಾಸಗಿ ವಸತಿ ಶಾಲೆಯಲ್ಲಿ 13 ವರ್ಷದ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್ಐಆರ್ ದಾಖಲಾಗಿವೆ.
ಶಾಲೆಯ ಮಾಲೀಕ ಬಿ.ಕೆ. ಮಂಜಪ್ಪ ಅವರನ್ನು ಪೊಲೀಸರು ಬಂಧಿಸಿದ್ದು, ಜೆಎಂಎಫ್‌ಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಒಂದು ಹಾಗೂ ಮತ್ತೊಂದು ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ.
ಗುರುವಾರ ಮದ್ಯಾಹ್ನ ವಿದ್ಯಾರ್ಥಿನಿ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ವಿದ್ಯಾರ್ಥಿನಿಗೆ ಸಾವಿಗೆ ಕಾರಣವೇನು ಎನ್ನುವುದು ಮರಣೋತ್ತರ ಪರೀಕ್ಷೆಯ ನಂತರ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಸಾವಿಗೆ ಕಾರಣವಾದ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು ಸಾಗರ ಗ್ರಾಮಾಂತರ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.