
ಬೆಂಗಳೂರು: ಶಾಲಾ ಮಕ್ಕಳಿಂದ ಶೌಚಾಲಯ ಗುಂಡಿ ಸ್ವಚ್ಛ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸಾಕಮ್ಮ ಹಾಗೂ ದೈಹಿಕ ಶಿಕ್ಷಕಿ ಸುಮಿತ್ರ ಅವರನ್ನು ಅಮಾನತು ಮಾಡಲಾಗಿದೆ. ಶಿಕ್ಷಣ ಇಲಾಖೆಯ ಡಿಡಿ ಕೆ.ಬಿ.ನಿಂಗರಾಜಪ್ಪ ಶಿಕ್ಷಕಿಯರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಶೌಚಾಲಯ ಗುಂಡಿ ಕ್ಲೀನ್ ಮಾಡಿಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛ ಮಾಡಿಸಿದ್ದ ಇಬ್ಬರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.
ಮಕ್ಕಳ ಹಕ್ಕು ಉಲ್ಲಂಘನೆಯಾಗಿದೆ ಎಂದು ಪರಿಶೀಲನೆ ನಡೆಸಿದ ಅಧಿಕಾರಿಗಳು ವರದಿ ನೀಡಿದ್ದರು. ಅಮಾನತು ಆದ ಇಬ್ಬರು ಶಿಕ್ಷಕಿಯರು ಸೇರಿ ಎಲ್ಲಾ ಶಿಕ್ಷಕಿಯರಿಗೂ ಕಾರಣ ಕೇಳಿ ಶಿಕ್ಷಣ ಇಲಾಖೆ ಡಿಡಿ ನೋಟಿಸ್ ಜಾರಿ ಮಾಡಿದ್ದಾರೆ.
ಶಿಕ್ಷಣ ಇಲಾಖೆಯಿಂದ ಶೌಚಾಲಯ, ಕುಡಿಯುವ ನೀರಿನ ನಿರ್ವಹಣೆಗೆ ಹಣ ಬಿಡುಗಡೆ ಮಾಡಲಾಗುತ್ತದೆ. 2024 -25ನೇ ಸಾಲಿನಲ್ಲಿ 43,495 ರೂ. ಹಣವನ್ನು ದುರ್ಬಳಕೆ ಮಾಡಿಕೊಂಡು ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.