ಹುಟ್ಟುಹಬ್ಬ ಅಥವಾ ಇನ್ನಾವುದೇ ಸಂಭ್ರಮಾಚರಣೆಗಳು ಬಂದರೆ ಅನೇಕ ವಿಧದಲ್ಲಿ ಆಚರಣೆ ಮಾಡಲಾಗುತ್ತದೆ. ಅನೇಕರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವವರಿಗೆ ಉಡುಗೊರೆ ಕೊಟ್ಟು ಶುಭ ಹಾರೈಸುತ್ತಾರೆ. ಇನ್ನೂ ಕೆಲವರು ವಿಭಿನ್ನವಾದ ರೀತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ.
ಹೀಗೆ ವಿದ್ಯಾರ್ಥಿಯೊಬ್ಬ ತಾನು ಪ್ರತಿದಿನ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ವಿಶಿಷ್ಟಚೇತನರೊಬ್ಬರನ್ನು ಕಾಣುತ್ತಾನೆ. ಇಂತಹ ವ್ಯಕ್ತಿಯ ಜೊತೆಯಲ್ಲಿ ವಿದ್ಯಾರ್ಥಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಹೃದಯಸ್ಪರ್ಶಿ ಕ್ಷಣಕ್ಕೆ ಕಾರಣನಾಗಿದ್ದಾನೆ. ಈ ಸಂತಸದ ಕ್ಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಕೇರಳದ ಕಣ್ಣೂರಿನ ವಿಹಾಯಸ್ ಎಂಬ ವಿದ್ಯಾರ್ಥಿಯ 20 ನೇ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಆತನ ಸ್ನೇಹಿತರು ಹಲವು ಪ್ಲಾನ್ ಗಳನ್ನು ಮಾಡಿದ್ದರು. ಆದರೆ, ಆತನ ಮತ್ತೊಬ್ಬ ಸ್ನೇಹಿತ ಮಿಧುಲ ಮಧು ವಿಹಾಯಸ್ ನನ್ನು ನೇರವಾಗಿ ವಿಶಿಷ್ಟಚೇತನನ ಮನೆಗೆ ಕರೆದೊಯ್ದು ಅಲ್ಲಿ ಅಪರಿಚಿತ ವಿಶಿಷ್ಟಚೇತನನೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳುವಂತೆ ಮಾಡಿದ್ದಾನೆ.
ವಿಹಾಯಸ್ ಮೊದಲ ಮಹಡಿಯಲ್ಲಿರುವ ಮನೆಗೆ ಹೋಗಿ ಬಾಗಿಲು ಬಡಿಯುತ್ತಿದ್ದಂತೆ ಅಲ್ಲಿದ್ದ ವಿಶಿಷ್ಟಚೇತನ ಮತ್ತು ಆತನ ತಾಯಿಗೆ ಅಚ್ಚರಿ ಮೇಲೆ ಅಚ್ಚರಿ. ಅಪರಿಚಿತ ವ್ಯಕ್ತಿ ನಮ್ಮ ಮನೆಗೆ ಬಂದಿದ್ದಾನಲ್ಲಾ ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಬಾಗಿಲು ತೆಗೆದರು. ಆದರೆ, ಪ್ರತಿದಿನ ವಿಹಾಯಸ್ ಕಾಲೇಜಿಗೆ ಹೋಗುತ್ತಿದ್ದುದನ್ನು ವಿಶಿಷ್ಟಚೇತನ ತನ್ನ ಬಾಲ್ಕನಿಯಲ್ಲಿ ಕುಳಿತು ನೋಡುತ್ತಿದ್ದನಾದ್ದರಿಂದ ವಿಹಾಯಸ್ ಬಂದದ್ದನ್ನು ನೋಡಿ ಆನಂದದಿಂದ ಹಾಯ್ ಎಂದು ಹೇಳಿದ.
ಇಬ್ಬರೂ ಸೋಫ ಮೇಲೆ ಕುಳಿತು ಕೇಕ್ ಕತ್ತರಿಸಿ ಪರಸ್ಪರ ಸಂಭ್ರಮ ಹಂಚಿಕೊಂಡ ಈ ದೃಶ್ಯ ಮಾತ್ರ ಹೃದಯಸ್ಪರ್ಶಿಯಾಗಿತ್ತು.