ಆ ವಿದ್ಯಾರ್ಥಿನಿಗೆ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕೆಂಬ ಹೆಬ್ಬಯಕೆ. ಆದರೆ, ಈ ಹೆಬ್ಬಯಕೆಗೆ ಉದರಬೇನೆ ಇನ್ನೇನು ತಣ್ಣೀರೆರಚಿತು ಎನ್ನುವಷ್ಟರಲ್ಲಿ ವೈದ್ಯರು ನೀಡಿದ ಚಿಕಿತ್ಸೆಯಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಆ ವೈದ್ಯರ ಸಲಹೆಯಂತೆ ಅಂಬುಲೆನ್ಸ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆಯನ್ನು ಬರೆದಿದ್ದಾಳೆ.
ತಮಿಳುನಾಡಿನ ತಿರುಪುರ ಜಿಲ್ಲೆಯ ಕುಪ್ಪನ್ ಡಂಪಾಲಯಂ ನಿವಾಸಿ 17 ವರ್ಷದ ರಿಥಾನಿಯಾ ತೀವ್ರ ಹೊಟ್ಟೆನೋವಿನಿಂದ ಬಳಲಿ ಮೇ 2 ರಂದು ಆಸ್ಪತ್ರೆಗೆ ದಾಖಲಾಗಿದ್ದಳು. ಕರುಳಿಗೆ ರಕ್ತ ಪೂರೈಸುವ ರಕ್ತನಾಳಗಳಲ್ಲಿ ಒಂದು ಸಂಪೂರ್ಣವಾಗಿ ಬ್ಲಾಕ್ ಆಗಿತ್ತು. ಇದನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ಲ್ಯಾಪರೋಸ್ಕೋಪಿ ಸರ್ಜರಿಯನ್ನು ಮಾಡಿದ್ದರು.
ಒಂದು ಕಡೆ ಆಸ್ಪತ್ರೆಯ ಹಾಸಿಗೆಯಲ್ಲಿ ನರಳುತ್ತಾ ಮಲಗಿರುವ ಬಾಧೆ, ಮತ್ತೊಂದೆಡೆ ಆರಂಭವಾಗಿರುವ ಪರೀಕ್ಷೆಯನ್ನು ಬರೆಯಲೇಬೇಕೆಂಬ ಹಪಾಹಪಿ ಆಕೆಯನ್ನು ಕಾಡುತ್ತಿತ್ತು.
ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರಿಯಕರನಿಂದಲೇ ಘೋರ ಕೃತ್ಯ
ಹೇಗಿದ್ದರೂ ಸರ್ಜರಿ ನಂತರ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಂತೆ ಕಂಡುಬಂದ ವಿದ್ಯಾರ್ಥಿನಿ ತನಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ವೈದ್ಯರ ಬಳಿ ಅಲವತ್ತುಕೊಂಡಳು. ಆಕೆಯ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿದ ವೈದ್ಯರ ತಂಡ ಹೋಗುವುದಾದರೆ ಅಂಬುಲೆನ್ಸ್ ನಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ಘೋಷಿಸಿದರು.
ಅಂಬುಲೆನ್ಸ್ ನಲ್ಲಿ ವೈದ್ಯಕೀಯ ತಂಡದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದ ರಿಥಾನಿಯಾ ಪರೀಕ್ಷೆಯನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಿರುವ ಡಾ.ಅರುಳ್ ಜ್ಯೋತಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ವೇಗವಾಗಿ ಆಕೆ ಚೇತರಿಸಿಕೊಳ್ಳುತ್ತಿದ್ದಳು ಮತ್ತು ಪರೀಕ್ಷೆ ಬರೆಯಬೇಕೆಂದು ಹಂಬಲ ವ್ಯಕ್ತಪಡಿಸಿದಳು. ನಾವು ತುಂಬಾ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಅವಲೋಕಿಸಿ ಆಕೆಗೆ ಅಂಬುಲೆನ್ಸ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರುವ ವ್ಯವಸ್ಥೆ ಮಾಡಿದೆವು’’ ಎಂದು ಹೇಳಿದ್ದಾರೆ.