ಕಲಬುರಗಿ: ಖಾಸಗಿ ಶಾಲೆ ಮುಖ್ಯಸ್ಥನೊಬ್ಬ 11 ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ಹಾಜಿಮಲಂಗ್ ಗಣಿಯಾರನನ್ನು ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ. ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ವಿವಿಧ ಸಂಘಟನೆಗಳು, ಮಂಗಳವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು, ಪಟ್ಟಣದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಆರೋಪಿ ಎರಡು ದಿನದ ಹಿಂದೆ ಶಾಲೆಯಲ್ಲಿ ಜೀವ ಬೆದರಿಕೆ ಹಾಕಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಮನೆಯಲ್ಲಿ ತಿಳಿಸದಂತೆ ಹೆದರಿಸಿದ್ದಾನೆ. ಬೇರೆಯವರಿಂದ ಬಾಲಕಿ ಪೋಷಕರಿಗೆ ಈ ವಿಷಯ ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಯನ್ನು ಬಂಧಿಸಲಾಗಿದೆ.
ತಾಲೂಕಿನಾದ್ಯಂತ ಈ ವಿಷಯ ಹರಡಿದ್ದು, ಮಂಗಳವಾರ ಬೆಳಿಗ್ಗೆ ಶ್ರೀರಾಮ ಸೇನೆ ರಾಜ್ಯ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹಾಗೂ ವಿವಿಧ ಸಮುದಾಯಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದು, ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿನಿಗೆ ಸೂಕ್ತ ಚಿಕಿತ್ಸೆ, ಸರ್ಕಾರದಿಂದ ಸೌಲಭ್ಯ ನೀಡಲಾಗುವುದು. ನಾನು ವೈಯಕ್ತಿಕವಾಗಿ 2.50 ಲಕ್ಷ ರೂಪಾಯಿ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.