ಬಿಹಾರದಲ್ಲಿ ಕಳೆದ ವಾರದಿಂದ ಮೆಟ್ರಿಕುಲೇಶನ್ ಪರೀಕ್ಷೆ ನಡೆಯುತ್ತಿದ್ದು, ಶುಕ್ರವಾರದಂದು ವಿಷಯವೊಂದರ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿನಿಯರು ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡಿದ್ದಾರೆ. ಇಂತಹದೊಂದು ಘಟನೆ ಪಾಟ್ನಾದಲ್ಲಿ ನಡೆದಿದೆ.
ಬಹುತೇಕ ವಿದ್ಯಾರ್ಥಿನಿಯರು ತಮ್ಮ ಪೋಷಕರೊಂದಿಗೆ ಬೈಕ್, ಕಾರು, ಆಟೋರಿಕ್ಷಾದಲ್ಲಿ ತೆರಳುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 2ರಲ್ಲಿ ತೀವ್ರ ಟ್ರಾಫಿಕ್ ಉಂಟಾದ ಪರಿಣಾಮ ಸಿಲುಕಿಕೊಂಡಿದ್ದಾರೆ. ಇನ್ನೇನು ವಾಹನಗಳು ಮುಂದೆ ಸಾಗುವುದೇ ಇಲ್ಲ ಎಂಬ ಪರಿಸ್ಥಿತಿ ಎದುರಾಗಿದೆ.
ಆಗ ಪರೀಕ್ಷೆಗೆ ಸಕಾಲಕ್ಕೆ ಹಾಜರಾಗಬೇಕಿದ್ದ ಕಾರಣದಿಂದ ವಿದ್ಯಾರ್ಥಿನಿಯರು ವಾಹನಗಳಿಂದ ಇಳಿದು ಓಡಲು ಆರಂಭಿಸಿದ್ದಾರೆ. ಹೀಗೆ ಹೈವೇನಲ್ಲಿ 2 ಕಿ.ಮೀ. ವರೆಗೆ ಓಡುತ್ತಲೇ ಪರೀಕ್ಷಾ ಕೇಂದ್ರ ತಲುಪಿದ್ದಾರೆ. ಕೈಯಲ್ಲಿ ಹಾಲ್ ಟಿಕೆಟ್, ಪುಸ್ತಕ, ಪೆನ್ ಹಿಡಿದು ವಿದ್ಯಾರ್ಥಿನಿಯರು ಓಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಟ್ರಾಫಿಕ್ ಜಾಮ್ ಉಂಟಾಗಿದೆ. ಪರೀಕ್ಷಾ ಸಂದರ್ಭದಲ್ಲಿ ಇದನ್ನು ತೆರವುಗೊಳಿಸಿಕೊಡುವಂತೆ ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.