ನಮ್ಮ ಜೀವನದಲ್ಲಿ ಸಾಕಷ್ಟು ಅನುಕೂಲತೆಗಳಿದ್ದರೂ ಸಹ ನಾವು ಆಗಾಗ ನಮ್ಮಲ್ಲಿ ಇಲ್ಲದೇ ಇರುವುದನ್ನು ನೆನೆದು ಕೊರಗುವುದು ಒಂದು ದೊಡ್ಡ ಮನೋರೋಗವೇ ಸರಿ.
ಆದರೆ ನಮ್ಮ ಸುತ್ತಲಿನ ಪರಿಸರವನ್ನು ನೋಡಿದಾಗ ತೀರಾ ಒಪ್ಪೊತ್ತಿನ ಊಟ ಸಿಕ್ಕರೇ ಸಾಕು ಎನ್ನುವಷ್ಟು ಅಸಹಾಯಕ ಜೀವನ ಸಾಗಿಸುವ ಅನೇಕ ಜೀವಗಳು ಕಣ್ಣ ಮುಂದೆ ಬೀಳುತ್ತವೆ.
ಕೊಳಲು ಮಾರಾಟಗಾರರೊಬ್ಬರನ್ನು ಭೇಟಿ ಮಾಡಿದ ವ್ಲಾಗರ್ ಒಬ್ಬರು ದಿನಕ್ಕೆ ಎರಡು ಹೊತ್ತಿನ ಊಟ ಪಡೆಯಲು ಅವರೆಷ್ಟು ಹೋರಾಟ ಮಾಡುತ್ತಿದ್ದಾರೆ ಎಂದು ತೋರಿದ್ದಾರೆ.
ಬೆಳಿಗ್ಗೆಯಿಂದ ಊಟವಿಲ್ಲದೇ ನಿರಂತರವಾಗಿ ದುಡಿಯುತ್ತಿರುವ ಇವರ ಜೇಬಿನಲ್ಲಿ 60 ರೂ. ಮಾತ್ರ ಉಳಿದಿದ್ದು, ಖಾಲಿ ಹೊಟ್ಟೆಯಲ್ಲೂ ಸಹ ತಮ್ಮ ಮಾರಾಟವನ್ನು ಮುಂದುವರೆಸಿದ್ದಾರೆ.
ಒಂದೊಮ್ಮೆ ತೀರಾ ಕಣ್ಣೀರಿಡುವ ಮಟ್ಟದಲ್ಲಿ ನೋವು ತೋಡಿಕೊಳ್ಳುವ ಈ ಶ್ರಮಿಕನನ್ನು ಕಂಡು ನೆಟ್ಟಿಗರು ಮುಮ್ಮಲ ಮರುಗಿದ್ದಾರೆ.
ಈ ನೋವಿನಲ್ಲೂ ತಮ್ಮ ಕೊಳಲು ವಾದನದ ಮೂಲಕ ಗ್ರಾಹಕರನ್ನು ಕಂಡುಕೊಳ್ಳಲು ಯತ್ನಿಸುವ ಇವರ ಪಾಡನ್ನು ಮನಮುಟ್ಟುವಂತೆ ವಿವರಿಸುವ ವ್ಲಾಗರ್, “ನಾವೆಲ್ಲಾ ಪಿಜ್ಝಾ, ಬರ್ಗರ್ ತಿನ್ನಲು ನೂರಾರು ರೂಪಾಯಿ ವ್ಯಯಿಸುತ್ತೇವೆ. ಆದರೆ ಇಂಥ ಕರ್ಮಯೋಗಿಗಳು ಒಪ್ಪೊತ್ತಿನ ಊಟಕ್ಕೆ ಏನೆಲ್ಲಾ ಕಷ್ಟ ಪಡುತ್ತಿದ್ದಾರೆ ನೋಡಿ……,” ಎಂದು ವಿವರಿಸುತ್ತಿದ್ದಾರೆ.
ವಿಡಿಯೋ ಕಂಡ ನೆಟ್ಟಿಗರಿಗೆ ಕೊಳಲು ಮಾರಾಟಗಾರನ ಮೇಲೆ ಮರುಕ ಬಂದಿದ್ದು, ಅವರಿಗೆ ನೆರವಾಗಲು ಸಾಧ್ಯವೇ ಎಂದು ಕಾಮೆಂಟ್‌ಗಳ ಮೂಲಕ ಕೇಳಿದ್ದಾರೆ.