ಭೋಪಾಲ್: ಮಧ್ಯಪ್ರದೇಶದ ರೈತರೊಬ್ಬರಿಗೆ ಅದೃಷ್ಟ ಒಲಿದು ಬಂದಿದೆ. 200 ರೂಪಾಯಿಗೆ ಗುತ್ತಿಗೆ ಪಡೆದ ಜಾಗದಲ್ಲಿ ಉಳುಮೆ ಮಾಡುವಾಗ ಬರೋಬ್ಬರಿ 60 ಲಕ್ಷ ರೂಪಾಯಿ ಮೌಲ್ಯದ ವಜ್ರ ಸಿಕ್ಕಿದೆ.
ಮಧ್ಯಪ್ರದೇಶದ ಪೊನ್ನಪಟ್ಟಣದ ಲಖನ್ ಯಾದವ್ ಕಳೆದ ತಿಂಗಳು 200 ರೂಪಾಯಿಗೆ ಜಮೀನು ಗುತ್ತಿಗೆ ಪಡೆದುಕೊಂಡಿದ್ದಾರೆ. ಈ ಜಾಗದಲ್ಲಿ ಹೊಳೆಯುವ ರೀತಿಯ ಕಲ್ಲು ಸಿಕ್ಕಿದೆ. ಅದನ್ನು ವಜ್ರ ಇರಬಹುದು ಎಂದು ತಿಳಿದ ಅವರು ಜಿಲ್ಲಾ ವಜ್ರ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷಿಸಿದ್ದಾರೆ. ಅದು ನಿಜವಾದ ವಜ್ರ ಎನ್ನುವುದು ಗೊತ್ತಾಗಿದೆ.
ವಜ್ರ ಹರಾಜು ಕೇಂದ್ರದಲ್ಲಿ ಅದನ್ನು ಹರಾಜು ಮಾಡಲಾಗಿದ್ದು, 14.98 ಕ್ಯಾರೆಟ್ ನ ವಜ್ರ ಬರೋಬ್ಬರಿ 60.6 ಲಕ್ಷ ರೂಪಾಯಿಗೆ ಸೇಲ್ ಆಗಿದೆ. ಈ ಹಣವನ್ನು ನಾಲ್ವರು ಮಕ್ಕಳ ಭವಿಷ್ಯಕ್ಕೆ ವಿನಿಯೋಗಿಸುವುದಾಗಿ ಲಖನ್ ಯಾದವ್ ಹೇಳಿದ್ದಾರೆ. ದೊಡ್ಡ ಮೊತ್ತದ ಹಣವನ್ನು ಠೇವಣಿ ಇಡುತ್ತೇನೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಈ ಹಣದಲ್ಲಿ 1 ಲಕ್ಷ ರೂಪಾಯಿ ಮೌಲ್ಯದ ಹೊಸ ಬೈಕ್, 2 ಎಮ್ಮೆಗಳನ್ನು ಕೂಡ ಲಖನ್ ಯಾದವ್ ಖರೀದಿಸಿದ್ದಾರೆ.