ಪಟ್ಟೆಯುಳ್ಳು ಕತ್ತೆ ಕಿರುಬವನ್ನ ಬೆನ್ನಟ್ಟಿ ಕೊಂದಿರೋ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಧ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ. ಹುಲಿಗಳಂತೆಯೇ ಅದೇ ಕಾನೂನಿನಡಿಯಲ್ಲಿ ಸಂರಕ್ಷಿಸಲ್ಪಟ್ಟ ಕತ್ತೆ ಕಿರುಬವನ್ನ ಯಾವುದೇ ಕಾರಣವಿಲ್ಲದೆ ಬೆನ್ನಟ್ಟಿ ಕೊಲ್ಲಲಾಗಿದೆ.
ಫೆಬ್ರವರಿ 9 ರಂದು ಮೋಟಾರ್ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಪ್ರಾಣಿಯನ್ನು ಹಿಂಬಾಲಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ನಂತರ ಹೊರಬಂದ ಮತ್ತೊಂದು ಕ್ಲಿಪ್ ನಲ್ಲಿ ವ್ಯಕ್ತಿಯೊಬ್ಬ ಕತ್ತೆ ಕಿರುಬ ಬಾಯಲ್ಲಿ ಕೋಲು ಇಟ್ಟು ಹಿಂಸಿಸುತ್ತಿರುವಾಗ ಅದರ ಕಾಲುಗಳನ್ನು ಕಟ್ಟಲಾಗಿತ್ತು.
ವಿಡಿಯೋ ನೋಡಿದ ಸೋಲಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತರು. ತಕ್ಷಣವೇ ಪ್ರತಿಕ್ರಿಯಿಸಿ ಪುಣೆ ಮೂಲದ ಎನ್‌ಜಿಒ ರೆಸ್ಕ್ ಸಿಟಿಗೆ ಮಾಹಿತಿ ನೀಡಿದ್ದು, ಆದರೆ ಅದರ ಸದಸ್ಯರು ಸ್ಥಳಕ್ಕೆ ತಲುಪುವ ಹೊತ್ತಿಗೆ ಪ್ರಾಣಿ ಸಾವನ್ನಪ್ಪಿದೆ.
ಈ ಕ್ರೌರ್ಯಕ್ಕೆ ವನ್ಯಜೀವಿ ತಜ್ಞರು ಹಾಗೂ ಪ್ರಾಣಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮುಂಬೈನ ಪಶ್ಚಿಮ ವನ್ಯಜೀವಿ ವಲಯದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಡಾ. ಕ್ಲೆಮೆಂಟ್ ಬೆನ್, “ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಉಳಿದವರ ಪತ್ತೆ ಕಾರ್ಯ ನಡೆಯುತ್ತಿದೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು” ಎಂದರು.
ಪಟ್ಟೆಯುಳ್ಳ ಕತ್ತೆಕಿರುಬವು ಭಾರತೀಯ ಉಪಖಂಡದಲ್ಲಿ ಕಂಡುಬರುವ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸಂರಕ್ಷಿಸಲ್ಪಟ್ಟಿರುವ ಏಕೈಕ ಹೈನಾ ಜಾತಿಯಾಗಿದೆ.