ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಬ್ಯಾಂಕ್ ಸಾರಿಗೆ ಸೇರಿದಂತೆ ಅನೇಕ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಬ್ಯಾಂಕ್ ನೌಕರರು, ಕಾರ್ಮಿಕರು, ರೈತರು, ಆಟೋ ಚಾಲಕರು, ಸಾರಿಗೆ ಸಿಬ್ಬಂದಿ ಸೇರಿದಂತೆ ಅನೇಕ ಕಾರ್ಮಿಕರು, ನೌಕರರ ಸಂಘಟನೆಗಳು ಮುಷ್ಕರಕ್ಕೆ ಕೈಜೋಡಿಸಿವೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಹಾಗೂ ಕೃಷಿ ಸಂಬಂಧಿತ ಕಾಯಿದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ದೇಶವ್ಯಾಪಿ ಮುಷ್ಕರ ಕೈಗೊಳ್ಳಲಾಗಿದೆ.
ಅಂಚೆ ಇಲಾಖೆ ನೌಕರರು, ಬಿಸಿಯೂಟ ನೌಕರರು, ಕಟ್ಟಡ, ಹಮಾಲಿ ಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆಟೋಚಾಲಕರು, ಬ್ಯಾಂಕ್, ವಿಮೆ, ದೂರಸಂಪರ್ಕ ಇಲಾಖೆ ನೌಕರರು ಸೇರಿದಂತೆ ವಿವಿಧ ವಿಭಾಗದ ಕಾರ್ಮಿಕರು ಮುಷ್ಕರ ಕೈಗೊಳ್ಳಲಿದ್ದಾರೆ.
ಕಾರ್ಮಿಕ ಸಂಹಿತೆಗಳ ವಾಪಸಾತಿ, ರೈತ ವಿರೋಧಿ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಕೃಷಿ ಸಂಬಂಧಿತ ಕಾನೂನು ತಿದ್ದುಪಡಿ ಕೈಬಿಡಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕೆಂದು ಒತ್ತಾಯಿಸಿ ಮುಷ್ಕರ ಕೈಗೊಳ್ಳಲಾಗಿದ್ದು, ವಿವಿಧ ಸೇವೆಗಳಲ್ಲಿ ವ್ಯತ್ಯವಾಗಬಹುದು ಎಂದು ಹೇಳಲಾಗಿದೆ.
ಆಟೋ, ಓಲಾ, ಉಬರ್, ಮ್ಯಾಕ್ಸಿಕ್ಯಾಬ್ ಮೊದಲಾದ ವಾಹನಗಳು ಇಂದು ರಸ್ತೆಗೆ ಇಳಿಯುವುದಿಲ್ಲ. ಚಾಲಕರ ಸಂಘಟನೆಗಳು ಪ್ರತಿಭಟನೆ ನಡೆಸಲಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಿವೆ.